ನಾಳೆ ‘ಮಹಿಷಾಸುರಮರ್ದಿನಿ ‘ಪುಸ್ತಕ ಬಿಡುಗಡೆ

ಮೈಸೂರು,ಸೆಪ್ಟಂಬರ್,18,2025 (www.justkannada.in):  ಸೆಪ್ಟಂಬರ್ 19 (ನಾಳೆ)ರಂದು  ಕೃಷ್ಣಮೂರ್ತಿ ಆರ್. ರಚಿಸಿರುವ ಮಹಿಷಾಸುರಮರ್ದಿನಿ ಕೃತಿ ಬಿಡುಗಡೆಯಾಗಲಿದೆ.

ನಗರದ ಲಕ್ಷ್ಮೀಪುರಂನಲ್ಲಿರುವ ಮಾಧವ ಕೃಪ ಸಭಾಂಗಣದಲ್ಲಿ ನಾಳೆ ಸಂಜೆ 6:30ಕ್ಕೆ ಮೈಸೂರು- ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕೃತಿಯನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಸಿದ್ಧ ಇತಿಹಾಸತಜ್ಞ, ಹಿರಿಯ ವಿದ್ವಾಂಸ ಡಾ. ಶಲ್ವಪಿಳ್ಳೆ ಅಯ್ಯಂಗಾರ್, ಮುಖ್ಯ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.

ಕೃತಿಗೆ ಸಂಶೋಧಕರೂ ಇತಿಹಾಸತಜ್ಞರೂ ಆದ ಡಾ. ದೇವರಕೊಂಡಾರೆಡ್ಡಿಯವರ ಮುನ್ನುಡಿ ಇದೆ. ಅಯೋಧ್ಯಾ ಪಬ್ಲಿಕೇಶನ್ಸ್ ಬೆಂಗಳೂರು ಹಾಗೂ ಮಂಥನ-ಮೈಸೂರು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಅಂದು ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟವಿರುತ್ತದೆ.

ನವರಾತ್ರಿ ದುಷ್ಟಸಂಹಾರದ, ಶಿಷ್ಟರಕ್ಷಣೆಯ ದ್ಯೋತಕವಾದ ಹಿಂದೂ ಪರ್ವ. ಲೋಕಕ್ಕೆ ಕಂಟಕನಾಗಿದ್ದ ಮಹಿಷನನ್ನು ಮರ್ದಿಸಿ ದೇವಿಯು ಎಲ್ಲೆಡೆ ಶಾಂತಿ-ಸುಭಿಕ್ಷೆಯನ್ನು ಮರುಸ್ಥಾಪಿಸಿದ ದಿವ್ಯ ಸಂದರ್ಭವಿದು.

ಆದರೆ ಮಹಿಷಾಸುರಮರ್ದಿನಿ ಯಾರು? ಈಕೆಯ ಪೌರಾಣಿಕ ಪ್ರಾಮುಖ್ಯ ಏನು? ಭಾರತದ ಇತಿಹಾಸದಲ್ಲಿ ಎಲ್ಲೆಲ್ಲಿ ಮಹಿಷಮರ್ದಿನಿಯ ಉಲ್ಲೇಖಗಳು ಸಿಗುತ್ತವೆ? ಈಕೆ ಕೇವಲ ದಕ್ಷಿಣಭಾರತದ ದೇವಿಯೆ, ಅಥವಾ ಭಾರತದ ಉದ್ದಗಲಕ್ಕೂ ಈಕೆಯ ಜನಪ್ರಿಯತೆ ವ್ಯಾಪಿಸಿದೆಯೆ? ಮಹಿಷಮಂಡಲ ನಿಜಕ್ಕೂ ಎಲ್ಲಿದೆ? ಮೈಸೂರು ದಸರೆಯ ಹಾಗೆ ಮಹಿಷ ದಸರೆ ಎಂಬುದೊಂದು ಇದೆಯೆ? ಮಹಿಷನ ಪ್ರಜೆಗಳು ಯಾರು? ಮಹಿಷಮರ್ದಿನಿಯ ಆರಾಧನೆ ಭಾರತದ, ಜಗತ್ತಿನ ಯಾವ್ಯಾವ ಭಾಗಗಳಲ್ಲಿ ನಡೆದುಬಂದಿದೆ? ನವರಾತ್ರಿಗೂ ಮಹಿಷನ ಮರ್ದನಕ್ಕೂ ಇರುವ ನಂಟು ಏನು?

ಈ ಎಲ್ಲ ಆಯಾಮಗಳಲ್ಲಿ ದೇವಿಯ ಹಾಗೂ ಮಹಿಷಸಂಹಾರದ ಪೂರ್ವಾಪರಗಳನ್ನು ಚರ್ಚಿಸುವ ಒಂದು ವಿಶಿಷ್ಟ ವಿಶ್ಲೇಷಣಾತ್ಮಕ ಸಂಶೋಧನ ಕೃತಿಯನ್ನು ಅಯೋಧ್ಯಾ ಪಬ್ಲಿಕೇಶನ್ಸ್ ಹೊರತರುತ್ತಿದೆ.

Key words: Tomorrow,Mysore,  Mahishasuramardini Book, Release