ಮೇಕೆದಾಟು ಯೋಜನೆ ವಿಳಂಬಕ್ಕೆ ಬಿಜೆಪಿಯೇ ಕಾರಣ: ನಾವಂತೂ ಪಾದಯಾತ್ರೆ ಮಾಡೇ ಮಾಡ್ತೇವೆ ಎಂದ ಮಾಜಿ ಸಿಎಂ ಸಿದ್ಧರಾಮಯ್ಯ.

ಮೈಸೂರು,ಜನವರಿ,3,2021(www.justkannada.in): ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬರದಂತೆ ತಡೆಯಲು ತಮಿಳುನಾಡಿನವರಿಗೆ ಬಿಜೆಪಿಯವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಈ ಯೋಜನೆ ವಿಳಂಬಕ್ಕೆ ಬಿಜೆಪಿಯೇ ಕಾರಣ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಆರೋಪಿಸಿದರು.

ಮೇಕೆದಾಟು ಪಾದಯಾತ್ರೆ ಹಿನ್ನಲೆ, ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.  ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದಿಷ್ಟು.

ಮೇಕೆದಾಟು ಯೋಜನೆ ಹೊಸ ಯೋಜನೆಯೇನಲ್ಲ. ಅದು ಬಹಳ ಹಳೆಯದಾದ ಯೋಜನೆ‌ಯಾಗಿದೆ. 1968 ರಲ್ಲಿ ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಕಾಂಗ್ರೆಸ್ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ಹಲವಾರು ಕಾರಣಗಳಿಂದ ಯೋಜನೆ ಅನುಷ್ಠಾನಕ್ಕೆ ಬಂದಿರಲಿಲ್ಲ. ಈಗ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಜನವರಿ 9 ರಿಂದ ಪಾದಯಾತ್ರೆ ಹಮ್ಮಿಕೊಂಡಿದೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ. ಆದರೆ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡ್ತಿದೆ, ಅವರ ಅಧಿಕಾರಾವಧಿಯಲ್ಲಿ ಯೋಜನೆ ಮಾಡಿಲ್ಲ, ಇದು ಗಿಮಿಕ್ ಎನ್ನುತ್ತಿದ್ದಾರೆ‌. ಹೆಚ್ ಡಿ ಕುಮಾರಸ್ವಾಮಿ ಬಹಳ ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ. ಎಂದು ಕಿಡಿಕಾರಿದರು.

ನಮ್ಮ ಪಕ್ಷದ ಸರ್ಕಾರದ ಅಧಿಕಾರವಧಿಯಲ್ಲಿ ಅನಗತ್ಯವಾಗಿ ಕಾಲಹರಣ ಮಾಡಿದ್ದೇವೆ ಎಂದು ಬಿಜೆಪಿಯವರು ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು. ತಮಿಳುನಾಡಿನವರು ರಾಜಕೀಯ ಕಾರಣಕ್ಕಾಗಿ ಖ್ಯಾತೆ ತೆಗೆಯುತ್ತಿದ್ದಾರೆ. ಈಗಿನ ಪರಿಸ್ಥಿಯಲ್ಲಿ ಮೇಕೆದಾಟು ಯೋಜನೆಯನ್ನು ತಡೆಯಲು ತಮಿಳುನಾಡಿನವರಿಗೆ ಸಾಧ್ಯವೇ ಇಲ್ಲ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಾಜಕೀಯ ಚಿತಾವಣೆಯಿಂದ ಮೇಕೆದಾಟು ಯೋಜನೆ ವಿರೋಧಿಸುತ್ತಿದ್ದಾರೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡಿನವರನ್ನು ಎತ್ತಿ ಕಟ್ಟುತ್ತಿರುವವರೇ ಬಿಜೆಪಿಯವರು. ಅಣ್ಣಾಮಲೈಯನ್ನು ಎತ್ತಿಕಟ್ಟುತ್ತಿರುವವರೇ ಬಿಜೆಪಿಯವರು. ತಮಿಳುನಾಡಿಗೆ ಬಿಜೆಪಿಯವರು ಬೆಂಬಲ ನೀಡುತ್ತಿದ್ದಾರೆ. ಅವರ ವೈಫಲ್ಯಗಳನ್ನು ಮರೆ ಮಾಚಲು ಕಾಂಗ್ರೆಸ್ ವಿರುದ್ದ ಆರೋಪ ಮಾಡುತ್ತಿದ್ದಾರೆ. ಮೇಕೆದಾಟು ಯೋಜನೆ ವಿಳಂಬವಾಗಲು ಬಿಜೆಪಿಯೇ ಕಾರಣ ಎಂದು ಆರೋಪಿಸಿದರು.

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಂದರೆ ರಾಜ್ಯದ 2.5 ಕೋಟಿ ಜನರಿಗೆ ಅನುಕೂಲವಾಗಲಿದೆ. ಆದರೆ ಯೋಜನೆ ಅನುಷ್ಠಾನಕ್ಕೆ ಬರದಂತೆ ತಡೆಯಲು ತಮಿಳುನಾಡಿನವರಿಗೆ ಬಿಜೆಪಿಯವರು ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಹಾಗಾಗಿ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಜನವರಿ 9 ರಿಂದ ಪಾದಯಾತ್ರೆ ಆರಂಭಿಸುತ್ತಿದ್ದೇವೆ‌ ಎಂದು ಸಿದ್ಧರಾಮಯ್ಯ ಹೇಳಿದರು.

ಕೋವಿಡ್ ನೆಪ ಹೇಳಿಕೊಂಡು ಮೇಕೆದಾಟು ಪಾದಯಾತ್ರೆ ತಡೆಗಟ್ಟಲು ಸರ್ಕಾರ ಪ್ರಯತ್ನ.

ಕೋವಿಡ್ ನೆಪ ಹೇಳಿಕೊಂಡು ಮೇಕೆದಾಟು ಪಾದಯಾತ್ರೆ ತಡೆಗಟ್ಟಲು ಸರ್ಕಾರ ಪ್ರಯತ್ನಿಸುವ ಸಾಧ್ಯತೆ ಇದೆ‌. ಆದರೆ ನಾವು ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಪಾದಯಾತ್ರೆ ಮಾಡುತ್ತೇವೆ. ಅವರು ಏನನ್ನು ಬೇಕಾದರೂ ಮಾಡಿಕೊಳ್ಳಲಿ, ನಾವಂತೂ ಪಾದಯಾತ್ರೆ ಮಾಡೇ ಮಾಡುತ್ತೇವೆ. ಮೇಕೆದಾಟು ಯೋಜನೆ ಸಂಬಂಧ ನಡೆಯುತ್ತಿರುವ ಹೋರಾಟವನ್ನು ಕಾಂಗ್ರೆಸ್ ಪಕ್ಷ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿದೆ. ಈ ವಿಚಾರದಲ್ಲಿ ಜೆಡಿಎಸ್ ನವರು ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಯಾವುದೇ ಕ್ಷಣದಲ್ಲಿ ಚುನಾವಣೆ ಬಂದರೂ ಎದುರಿಸಲು ಸಿದ್ದರಿದ್ದೇವೆ. 2023ರ ಏಪ್ರಿಲ್ ಗೆ ವಿಧಾನಸಭೆ ಚುನಾವಣೆ ನಡೆಯಲೆಂದು ನಾವು ಬಯಸುತ್ತೇವೆ. ಒಂದು ವೇಳೆ ಇವರ ಕಚ್ಚಾಟದಿಂದ ಸರ್ಕಾರ ಪತನವಾಗಿ ಚುನಾವಣೆ ಬಂದರೆ ಎದುರಿಸಲು ಸಿದ್ದರಿದ್ದೇವೆ. ಆದರೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗುವುದಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.

ಡಿಕೆಶಿ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ.

ಡಿ ಕೆ ಶಿವಕುಮಾರ್ ಹಾಗು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನನ್ನ ಅವರ ನಡುವೆ ಯಾವುದೇ ರೀತಿಯ ವೈಮನಸಿಲ್ಲ ಎಂದು ಸಿದ್ಧರಾಮಯ್ಯ ಸ್ಪಷ್ಟನೆ ನೀಡಿದರು.

Key words: BJP – responsible – delay – mekedatu- plan-  Former CM- Siddaramaiah-mysore