ಪ್ರತಾಪ್‌ ಸಿಂಹ ಡೋಂಗಿ ಹಿಂದುತ್ವವಾದಿ, ಪಕ್ಷಕ್ಕೆ ಕೆಟ್ಟ ಹೆಸರು ತಂದ ವ್ಯಕ್ತಿ- ಮೈಕಾ ಪ್ರೇಮಕುಮಾರ್‌

ಮೈಸೂರು,ಜನವರಿ,9,2026 (www.justkannada.in):  ಮಾಜಿ ಸಂಸದ ಪ್ರತಾಪ್‌ ಸಿಂಹ ಒಬ್ಬ ಡೋಂಗಿ ಹಿಂದುತ್ವವಾದಿ, ಬಿಜೆಪಿ ಕೊಟ್ಟ ಅವಕಾಶಗಳನ್ನು ದುರುಪಯೋಗ ಪಡಿಸಿಕೊಂಡು ಪಕ್ಷಕ್ಕೆ ಕೆಟ್ಟ ಹೆಸರು ತಂದ ವ್ಯಕ್ತಿ. ಆದ್ದರಿಂದಲೇ ಆತನನ್ನು ರಾಷ್ಟ್ರ ರಾಜಕಾರಣದಿಂದ ಪಕ್ಷದ ಹೈಕಮಾಂಡ್‌ ಹೊರ ಹಾಕಿದೆ ಎಂದು ಬಿಜೆಪಿ ಮುಖಂಡ ಮೈಕಾ ಪ್ರೇಮಕುಮಾರ್‌ ಆರೋಪಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಕಾ ಪ್ರೇಮಕುಮಾರ್‌, ನೀನು ರಾಜ್ಯ ರಾಜಕಾರಣಕ್ಕೆ ಬರುವ ಮೊದಲು ನಿನ್ನ ವಿರುದ್ಧ ಯುವತಿಯೊಬ್ಬಳು ಜಿಲ್ಲಾಧಿಕಾರಿಗಳಿಗೆ ದೂರು ಏಕೆ ಕೊಟ್ಟಳು, ನೀನು ಕೋರ್ಟ್‌ ನಲ್ಲಿ ನಿನ್ನ ಸುದ್ದಿಗಳ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದೇಕೆ ? ಕತ್ತಲ ಜಗತ್ತು ಪುಸ್ತಕವನ್ನು ಬಿಡುಗಡೆ ಮಾಡದಂತೆ ಸ್ಟೇ ತಂದಿದ್ದು ಏಕೆ ? ಹೈಕಮಾಂಡ್‌ ನಿನಗೆ ಟಿಕೆಟ್‌ ತಪ್ಪಿಸಲು ಕಾರಣ ಏನು ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟು ರಾಜಕಾರಣ ಮಾಡು ಎಂದು ಸವಾಲು ಹಾಕಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಲ್.‌ ನಾಗೇಂದ್ರ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದೀರಿ. ಪಾರ್ಲಿಮೆಂಟ್‌ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಿಲ್ಲ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಹರೀಶ್‌ಗೌಡ ಪರವಾಗಿ ನಿಮ್ಮ ಬೆಂಬಲಿಗರ ಮೂಲಕ ಸಹಾಯ ಮಾಡಿಸಿದ್ದೀರಿ. ಅಂತಹವರನ್ನು ಅಕ್ಕಪಕ್ಕ ಕೂರಿಸಿಕೊಂಡು ರಾಜ್ಯ ರಾಜಕಾರಣಕ್ಕೆ ಬರುವುದಾಗಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಒಬ್ಬ ಅಂಕಣಕಾರನಿಗೆ ಟಿಕೆಟ್‌ ನೀಡಿ ಪಕ್ಷ ಎಂಪಿ ಮಾಡಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಜನರ ಸೇವೆ ಮಾಡಬೇಕಾದ ನೀನು ಪಾರ್ಲಿಮೆಂಟ್‌ ಗೆ ಬಾಂಬ್‌ ಹಾಕುವವರಿಗೆ ಪಾಸ್‌ ಕೊಡುತ್ತೀಯ. ಅಧಿಕಾರ ಇದ್ದಾಗ ಒಮ್ಮೆಯೂ ಜನರ ಸಮಸ್ಯೆಗೆ ಸ್ಪಂದಿಸಿಲ್ಲ. ಈಗ ಪಕ್ಷ ಈತನಿಗೆ ಯಾವುದೇ ಜವಾಬ್ದಾರಿ ಕೊಟ್ಟಿಲ್ಲ. ಈಗ ಮಾಡಲು ಕೆಲಸವಿಲ್ಲವೆಂಬ ಕಾರಣಕ್ಕೆ ಕರೆಯದಿದ್ದರೂ ನೀನೇ ಕಾರ್ಯಕ್ರಮಗಳಿಗೆ ಹೋಗಿ ಪ್ರಚೋದನಾಕಾರಿ ಭಾಷಣ ಮಾಡಿ ಯುವಕರನ್ನು ದಿಕ್ಕು ತಪ್ಪಿಸುತ್ತಿರುವ ಕೆಲಸ ಮಾಡುತ್ತಿರುವೆ ಎಂದು ದೂರಿದರು.

ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂದು ತಾವೇ ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಹೀಗೆ ತಾವೇ ಘೋಷಿಸಿಕೊಳ್ಳಲು ಪಕ್ಷದಲ್ಲಿ ಅವಕಾಶ ಇದೆಯೇ ? ಸ್ವಯಂಘೋಷಿತ ಅಭ್ಯರ್ಥಿ ಪ್ರತಾಪ್ ಸಿಂಹ ತಮ್ಮ ಘೋಷಣೆಗೆ ಹೈಕಮಾಂಡ್ ಬೆಂಬಲ ಇದೆ ಎನ್ನುವುದನ್ನು‌ ಸಾಬೀತುಪಡಿಸುವರೇ ? ಎರಡೂವರೆ ವರ್ಷ ಮೊದಲೇ ಒಂದು ಕ್ಷೇತ್ರದ ಅಭ್ಯರ್ಥಿ ಎಂದು ತನ್ನನ್ನು ತಾನೇ ಘೋಷಿಸಿಕೊಂಡು ಒಂದೇ ಪಕ್ಷದ ಕಾರ್ಯಕರ್ತರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡಲು ವಿರೋಧ ಪಕ್ಷದಿಂದ ಸುಪಾರಿ ಪಡೆದಿದ್ದಾರಾ ? ಎಂದು ಪ್ರೇಮ್‌ ಕುಮಾರ್‌ ಕಿಡಿಕಾರಿದರು.

Key words: Pratap Simha, Dongi Hindutva, BJP, Mika Premkumar