ಬಿಜೆಪಿ ಪಾಳಯದಲ್ಲಿ ಎಲ್ಲವೂ ಗುಪ್ತ್ ಗುಪ್ತ್: ತಂತ್ರಗಾರಿಕೆ ಸುಳಿವು ಬಿಡದ ನಾಯಕರು

ಬೆಂಗಳೂರು:ಜುಲೈ-8 :ರಾಜಕೀಯ ಅತಂತ್ರ ಸ್ಥಿತಿ ನಿರ್ವಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಭಾನುವಾರ ತೀವ್ರತರವಾದ ಚಟುವಟಿಕೆ ನಡೆದರೆ ಬಿಜೆಪಿಯಲ್ಲಿ ಮಾತ್ರ ಎಲ್ಲವೂ ಮೌನ. ಬೆಳಗ್ಗೆಯಿಂದ ಸಂಜೆವರೆಗೂ ಯಾವುದೇ ಬೆಳವಣಿಗೆ ಕಾಣದಿದ್ದರೂ ಸಂಜೆ ನಂತರ ಬಿರುಸುಗೊಂಡಿತು. ಆದರೆ, ತಂತ್ರದ ಬಗ್ಗೆ ಮಾತ್ರ ಎಲ್ಲೂ ಸುಳಿವು ಬಿಟ್ಟುಕೊಡುತ್ತಿಲ್ಲ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆಯಿಂದ ಯಾವೊಬ್ಬ ಶಾಸಕರಾಗಲಿ, ಮುಖಂಡರಾಗಲಿ ಸುಳಿದಿರಲಿಲ್ಲ. ಇತ್ತ ಡಾಲರ್ಸ್ ಕಾಲನಿಯಲ್ಲಿರುವ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲೂ ಅಂಥದ್ದೇನೂ ಬೆಳವಣಿಗೆ ಕಾಣಲಿಲ್ಲ. ಯಡಿಯೂರಪ್ಪ ಅವರು ತುಮಕೂರು, ಹಾಸನ ಜಿಲ್ಲೆ ಪ್ರವಾಸ ಕೈಗೊಂಡಿದ್ದರಿಂದ ಬೆಳಗ್ಗೆ ಮಾಜಿ ಡಿಸಿಎಂ ಆರ್.ಅಶೋಕ್, ಶಾಸಕ ರೇಣುಕಾಚಾರ್ಯ ಮತ್ತಿತರರು ಬಿಎಸ್​ವೈ ಅವರನ್ನು ಭೇಟಿಯಾದದ್ದು ಬಿಟ್ಟರೆ, ಬಂದು ಹೋಗುವವರು ಇರಲಿಲ್ಲ. ಆದರೆ, ಸಂಜೆಯಾಗುತ್ತಿದ್ದಂತೆ ಶಾಸಕರ ದಂಡು ಬಿಎಸ್​ವೈ ಮನೆ ಮುಂದೆ ಜಮಾಯಿಸಿ ಅವರ ಬರುವಿಕೆಗೆ ಕಾದು ಕುಳಿತಿದ್ದರು.

ಬಿ.ಎಸ್. ಯಡಿಯೂರಪ್ಪ ಪ್ರವಾಸ ಮೊಟಕು

ಪೂರ್ವ ನಿಗದಿಯಂತೆ ಹಾಸನ ಮತ್ತು ತುಮಕೂರು ಪ್ರವಾಸ ಕೈಗೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅರ್ಧದಲ್ಲಿಯೇ ಮೊಟಕುಗೊಳಿಸಿ ಬೆಂಗಳೂರಿನ ನಿವಾಸಕ್ಕೆ ಸಂಜೆ ವಾಪಸಾದರು. ಶಾಸಕರೊಂದಿಗೆ ಚರ್ಚೆ ನಡೆಸಿದ ಬಿಎಸ್​ವೈ ಮುಂದಿನ ಹೆಜ್ಜೆ, ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು. ಶಾಸಕರಾದ ಆರ್.ಅಶೋಕ್, ವಿ.ಸೋಮಣ್ಣ, ಕುಮಾರ್ ಬಂಗಾರಪ್ಪ, ಸುನೀಲ್​ಕುಮಾರ್, ಪೂರ್ಣಿಮಾ, ಪ್ರೀತಂಗೌಡ, ಬಸವರಾಜ ದಡೇಸ್​ಗೂರ್ ಮತ್ತಿತರರು ಇದ್ದರು.

ಇಂದು ಬಿಜೆಪಿ ಶಾಸಕಾಂಗ ಸಭೆ

ಕಾಂಗ್ರೆಸ್ ಮತ್ತು ಜೆಡಿಎಸ್​ನಿಂದ ರಿವರ್ಸ್ ಆಪರೇಷನ್ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಸೋಮವಾರ ಬಿಜೆಪಿ ಶಾಸಕಾಂಗದ ಸಭೆ ನಡೆಯಲಿದೆ. ರಾಜ್ಯ ಬಿಜೆಪಿ ಕಾರ್ಯಾಲಯದ ಜಗನ್ನಾಥ ಭವನದಲ್ಲಿ ಸಂಜೆ 5ಕ್ಕೆ ಸಭೆ ನಡೆಯಲಿದ್ದು, ಎಲ್ಲ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ., ಈ ಮೂಲಕ ಅಲ್ಲಿ ಕೈಗೊಳ್ಳಲಾಗುವ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂಬ ಸಂದೇಶ ಸಾರುವುದೂ ಸಭೆಯ ಮುಖ್ಯ ಉದ್ದೇಶವಾಗಿದ್ದು, ಪಕ್ಷದ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ತಂತ್ರವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ.

ಮಧ್ಯಂತರ ಚುನಾವಣೆಗೆ ಅವಕಾಶ ನೀಡಲ್ಲ

ಸಿದ್ದರಾಮಯ್ಯ ಆಗಲಿ, ಕುಮಾರಸ್ವಾಮಿ ಆಗಲಿ ಯಾರ ಹೇಳಿಕೆಗೂ ಪ್ರತಿಕ್ರಿಯಿಸುವುದಿಲ್ಲ. ಮಧ್ಯಂತರ ಚುನಾವಣೆಗೆ ಅವಕಾಶ ನೀಡುವುದಿಲ್ಲ. ನಾವು 105 ಶಾಸಕರಿದ್ದು, ಮುಂದೇನು ಎನ್ನುವುದನ್ನು ಎಲ್ಲವನ್ನೂ ಸಮಯವೇ ನಿರ್ಣಯ ಮಾಡುತ್ತದೆ. ನಾನು ರಾಜ್ಯಪಾಲರನ್ನು ಭೇಟಿ ಮಾಡಲ್ಲ, ದೆಹಲಿಗೂ ಹೋಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ನಮ್ಮ ಪಕ್ಷದ ನಾಯಕರ್ಯಾರೂ ಮುಂಬೈನಲ್ಲಿರುವ ಅತೃಪ್ತ ಶಾಸಕರೊಂದಿಗೆ ಇಲ್ಲ. ಯಾವುದೇ ಸಮಯ ನಿಗದಿಪಡಿಸಿಲ್ಲ. ಹಿಂದೆಯೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ನನ್ನನ್ನು ಕಾಂಗ್ರೆಸ್-ಜೆಡಿಎಸ್​ನ ಯಾವುದೇ ಶಾಸಕರು ಸಂರ್ಪಸಿಲ್ಲ. ಈಗಿನ ವಿದ್ಯಮಾನಗಳ ಹಿಂದೆ ನಮ್ಮ ಪಕ್ಷದ ಪಾತ್ರವಿಲ್ಲ. ಏನಾಗುತ್ತದೆ ಕಾದು ನೋಡೋಣ ಎಂದು ಬೆಂಗಳೂರು ಹಾಗೂ ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಎಸ್​ಬಿಎಂ ಮೇಲೆ ಬಿಜೆಪಿ ಅನುಮಾನ

ಶನಿವಾರ ನಡೆದ ರಾಜಕೀಯ ಪ್ರಹಸನದಲ್ಲಿ ಬೆಂಗಳೂರಿನ ಮೂವರು ಶಾಸಕರು ಸ್ಪೀಕರ್ ಕಚೇರಿಗೆ ದಿಢೀರ್ ಆಗಮಿಸಿ ರಾಜೀನಾಮೆ ಸಲ್ಲಿಸಿದ್ದು, ಕಾಂಗ್ರೆಸ್​ಗಷ್ಟೇ ಅಲ್ಲ ಬಿಜೆಪಿಗೂ ಆಶ್ಚರ್ಯ ತಂದಿದೆ.

ಪೂರ್ವ ನಿರ್ಧಾರದಂತೆ ಶಾಸಕರಾದ ರಮೇಶ್ ಜಾರಕಿಹೊಳಿ, ಎಚ್.ವಿಶ್ವನಾಥ್ ನೇತೃತ್ವದಲ್ಲಿ ಒಟ್ಟು ಎಂಟು ಶಾಸಕರು ರಾಜೀನಾಮೆ ಸಲ್ಲಿಸಲು ಬಂದಿದ್ದರು. ನಿರೀಕ್ಷೆಯಂತೆ ರಾಮಲಿಂಗಾರೆಡ್ಡಿ ಕೂಡ ಆಗಮಿಸಿ ಅತೃಪ್ತರ ಬಣ ಸೇರಿಕೊಂಡರು. ಅದೇ ವೇಳೆ, ಬೆಂಗಳೂರಿನ ಮೂವರು ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಬೈರತಿ ಬಸವರಾಜು (ಎಸ್​ಬಿಎಂ) ಪ್ರವೇಶ ಬಿಜೆಪಿಯ ಅನುಮಾನ ಹಾಗೂ ಅಚ್ಚರಿಗೆ ಕಾರಣವಾಗಿದೆ.

ಎಂಟು ಮಂದಿ ಶಾಸಕರು ಪೂರ್ವನಿಯೋಜಿತ ಯೋಜನೆಯಂತೆ ನಗರದ ಖಾಸಗಿ ಹೊಟೇಲ್​ನಲ್ಲಿ ವಾಸ್ತವ್ಯ ಹೂಡಿ, ಶನಿವಾರ ಬೆಳಗ್ಗೆ ಸ್ಪೀಕರ್ ಕಚೇರಿಗೆ ನೇರವಾಗಿ ಆಗಮಿಸಿ ರಾಜೀನಾಮೆ ಸಲ್ಲಿಸಿದ್ದರು. ಅವರ ಹಿಂದೆಯೇ ಬಂದ ಮೂವರು ಶಾಸಕರು, ನಾವು ಪಕ್ಷದ ಪರವಾಗಿ ಬಂದಿದ್ದೇವೆ. ಅತೃಪ್ತರನ್ನು ವಾಪಸ್ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೇವೆ ಎಂದು ಹೇಳಿ ಸ್ಪೀಕರ್ ಕಚೇರಿ ಪ್ರವೇಶಿಸಿದವರು ತಾವೂ ರಾಜೀನಾಮೆ ನೀಡಿದ್ದರು. ಈ ಮೂವರೂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿರುವುದು ಬಿಜೆಪಿಯ ಅನುಮಾನಕ್ಕೆ ಪುಷ್ಟಿ ನೀಡಿದೆ.

ಹೆಚ್ಚಿದ ಅನುಮಾನ, ಅಂತರ: ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ಪತ್ರವನ್ನು ಹರಿದು ಹಾಕಿದ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ನೀಡುವಂತೆ ಬಿಜೆಪಿ ಮುಖಂಡರು ಒತ್ತಡ ಹೇರಿದ್ದರೂ ಮುನಿರತ್ನ ನಿರಾಕರಿಸಿದ್ದರು. ಇದೂ ಅನುಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಈಗಾಗಲೇ ಎರಡು ಬಾರಿ ಆಪರೇಷನ್ ಕಮಲಕ್ಕೆ ಮುಂದಾಗಿ ಕೈ ಸುಟ್ಟುಕೊಂಡಿರುವ ಬಿಜೆಪಿ ಮತ್ತೊಮ್ಮೆ ಅತೃಪ್ತರಿಂದ ತೊಂದರೆಯಾಗಬಹುದೆ ಎಂಬ ಗೊಂದಲದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದು, ಬೆಂಗಳೂರಿನ ಮೂವರೂ ಶಾಸಕರಿಂದ ಅಂತರ ಕಾಯ್ದುಕೊಂಡೇ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿಯೇ ಠಿಕಾಣಿ: ಮೂವರು ಶಾಸಕರ ಪೈಕಿ ಇಬ್ಬರು 8 ಅತೃಪ್ತ ಶಾಸಕರ ಜತೆ ಮುಂಬೈಗೆ ತೆರಳಿದ್ದರೆ, ಮುನಿರತ್ನ ಮಾತ್ರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ. ಅವರ ಬ್ಯಾನರ್ ಅಡಿ ನಿರ್ವಣದ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಮೊದಲೇ ನಿರ್ಧರಿತವಾಗಿರುವುದರಿಂದ ತಾವು ಮುಂಬೈಗೆ ತೆರಳಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದು, ಅತೃಪ್ತರ ಜತೆ ಇರುವುದಾಗಿ ಹೇಳಿಕೆ ನೀಡಿದ್ದಾರೆ.
ಕೃಪೆ: ವಿಜಯವಾಣಿ

ಬಿಜೆಪಿ ಪಾಳಯದಲ್ಲಿ ಎಲ್ಲವೂ ಗುಪ್ತ್ ಗುಪ್ತ್: ತಂತ್ರಗಾರಿಕೆ ಸುಳಿವು ಬಿಡದ ನಾಯಕರು
bjp-maintaining-silence-over-congress-mlas-resignation