ಬಿಜೆಪಿ ಸುಳ್ಳಿನ ಫ್ಯಾಕ್ಟರಿ: ಜನರಿಗೆ ಸತ್ಯ ಹೇಳುವುದರ ಜತೆಗೆ ಅರಿವು ಮೂಡಿಸಿ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಆಗಸ್ಟ್,16,2021(www.justkannada.in): ಬಿಜೆಪಿ ಎಂಬ ಸುಳ್ಳಿನ ಫ್ಯಾಕ್ಟರಿಯು ಉತ್ಪಾದಿಸಿ ಹಂಚುತ್ತಿರುವ ಸುಳ್ಳುಗಳ ಕುರಿತು ಜನರಿಗೆ ಸತ್ಯ ಹೇಳುವುದರ ಜೊತೆಗೆ ಆ ಬಗ್ಗೆ ಅರಿವು ಮೂಡಿಸುವಂತೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರಿಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

ರಚನಾತ್ಮಕ ಹೋರಾಟದ ಮೂಲಕ ಮನುಷ್ಯ ವಿರೋಧಿಯಾದ ಬಿಜೆಪಿಯ ಕ್ರೂರ ಹುನ್ನಾರಗಳನ್ನು ಬಯಲಿಗೆಳೆದು ಸೋಲಿಸುವುದೆ ಇಂದಿನ ಎಲ್ಲ ಸಮಸ್ಯೆಗಳಿಗೆ ಇರುವ ನಿಜವಾದ ಪರಿಹಾರ. ಹಾಗೆ ಮಾಡಬೇಕೆಂದರೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಷಯಗಳನ್ನು ಅಧ್ಯಯನ ಮಾಡಿ ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ಜಿಲ್ಲಾ ಅಧ್ಯಕ್ಷರಿಗೆ ಪತ್ರ ಬರೆದು ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.

ನಾನು ಬರೆದಿರುವ ‘ಜನಪೀಡಕ ಸರ್ಕಾರ’, ‘ ಐದು ಕಾಯ್ದೆಗಳು- ಅಸಂಖ್ಯಾತ ಸುಳ್ಳುಗಳು’ ಮತ್ತು ‘ಪೆಟ್ರೋಲ್, ಡೀಸೆಲ್ ನೂರು –ಜನರ ಬದುಕು ನುಚ್ಚು ನೂರು’ ಎಂಬ ಕಿರು ಪುಸ್ತಕಗಳನ್ನು ತಮ್ಮ ಓದಿಗಾಗಿ ಕಳಿಸುತ್ತಿದ್ದೇನೆ. ತಾವುಗಳು ಈ ವಿಚಾರಗಳನ್ನು ಓದಿ, ಕಿರು ಪುಸ್ತಕಗಳ ಕೊರತೆಯಾದರೆ ಪಕ್ಷದ ಶಿಷ್ಟಾಚಾರದಂತೆ ಮುದ್ರಿಸಿಕೊಂಡು ಎಲ್ಲ ಬೂತು ಮಟ್ಟದ ಕಾರ್ಯಕರ್ತರೂ ಓದುವಂತೆ ಮಾಡಿ ಜನರನ್ನು ನಿಜದ ಬೆಳಕಿನ ಕಡೆಗೆ ಮುನ್ನಡೆಸಬೇಕೆಂದು  ಸಿದ್ದರಾಮಯ್ಯ ಕೋರಿದ್ದಾರೆ.

ಪತ್ರದ ಮುಖ್ಯಾಂಶಗಳು ಹೀಗಿವೆ:

ಎರಡು ವರ್ಷದ ಹಿಂದೆ ಸಾಧಾರಣ ಕುಟುಂಬವೊಂದು ಜೀವನ ನಡೆಸಲು ಸರಾಸರಿ 5000 ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೆ ಇಂದು 11000 ರೂಪಾಯಿಗಳನ್ನು ಖರ್ಚು ಮಾಡಬೇಕಾದ ಪರಿಸ್ಥಿತಿಯಿದೆ. 25 ಕಿ.ಮೀ ದೂರದ ಹಳ್ಳಿಯಿಂದ ಪೇಟೆ/ಪಟ್ಟಣಕ್ಕೆ ಬಂದು ಕೂಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ ತನ್ನ ಬೈಕಿಗೆ  ದಿನಕ್ಕೊಂದು ಲೀಟರ್ ಪೆಟ್ರೋಲ್ ಹಾಕಿಸಿದರೆ 37-40 ಸಾವಿರ ರೂಪಾಯಿಗಳಷ್ಟು ಹಣ ಒಂದು ವರ್ಷಕ್ಕೆ ಖರ್ಚಾಗುತ್ತದೆ. ಇದರಲ್ಲಿ ಕನಿಷ್ಠ 24 ಸಾವಿರ ರೂಪಾಯಿಗಳಷ್ಟು ಮೊತ್ತವನ್ನು ತೆರಿಗೆ ರೂಪದಲ್ಲಿ ಸರ್ಕಾರಗಳಿಗೆ ಕಟ್ಟುತ್ತಾನೆ. ಮನಮೋಹನಸಿಂಗ್ ಅವರ ಕಾಲದಲ್ಲಿ ಒಂದು ಲೀಟರ್ ಪೆಟ್ರೋಲ್ ಮೇಲೆ 9.21 ರೂಗಳಷ್ಟು ತೆರಿಗೆ ಇದ್ದರೆ ಈಗ 33 ರೂಪಾಯಿಗಳನ್ನು ಕೇಂದ್ರ ಸರ್ಕಾರವೊಂದೆ ವಸೂಲಿ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಜನರ ದುಡಿಮೆ ಇಲ್ಲ. ಜನ ಅತ್ಯಂತ ವೇಗವಾಗಿ ಬಡವರಾಗುತ್ತಿದ್ದಾರೆ.

ಬೆಲೆ ಏರಿಕೆ ನಡುವೆ ನಡುವೆ ಕೊರೋನ ಬಂತು. ರಾಜ್ಯದ ಬಿಜೆಪಿ ಸರ್ಕಾರ ಕೊರೋನ ರೋಗದಲ್ಲೂ, ಹೆಣಗಳ ವಿಚಾರದಲ್ಲೂ ಭ್ರಷ್ಟಾಚಾರ ಮಾಡಿದರು. ಜನರು ಆಕ್ಸಿಜನ್, ವೆಂಟಿಲೇಟರ್, ಆಂಬ್ಯುಲೆನ್ಸ್, ಹಾಸಿಗೆ, ವೈದ್ಯರು ಹಾಗೂ ಅಗತ್ಯ ಔಷಧಗಳೂ ಇಲ್ಲದೆ  ಅನಾಥರಾಗಿ ಮರಣ ಹೊಂದಿದರು. ಜನರ ಸಾವುಗಳು ಸಾವುಗಳಲ್ಲ. ಅವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅದಕ್ಷತೆ, ನಿರ್ಲಕ್ಷ್ಯ, ಅದಮ್ಯ ಭ್ರಷ್ಟಾಚಾರಗಳಿಂದ  ನಡೆದ ಕಗ್ಗೊಲೆಗಳು ಎನ್ನದೆ ವಿಧಿಯಿಲ್ಲ.

ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಆರ್ಥಿಕತೆ, ಒಕ್ಕೂಟ ತತ್ವ, ರಾಜ್ಯದ ಭಾಷೆ, ಸಂಸ್ಕೃತಿ, ರಾಜ್ಯದ ಅಧಿಕಾರ, ಸಂಪತ್ತುಗಳ ಮೇಲೆ ತೀವ್ರ ದಬ್ಬಾಳಿಕೆ ನಡೆಸುತ್ತಿದೆ. ನಮ್ಮ ರಾಜ್ಯದಿಂದ ಐಟಿಬಿಟಿ ಕ್ಷೇತ್ರಗಳನ್ನು  ಹೊರತು ಪಡಿಸಿಯೇ ಸುಮಾರು 2.5 ಲಕ್ಷ ಕೋಟಿ ಸಂಪತ್ತನ್ನು  ವಿವಿಧ ತೆರಿಗೆ ಮತ್ತು ಸೆಸ್‍ ಗಳ ಮೂಲದಿಂದ ಸಂಗ್ರಹಿಸುತ್ತಿದೆ. ಆದರೆ ನಮಗೆ 2020 ರಲ್ಲಿ ವಾಪಸ್ಸು ಬಂದಿದ್ದು ಕೇವಲ 38 ಸಾವಿರ ಕೋಟಿ ರೂಗಳು ಮಾತ್ರ. ನಿಯಮ ಪ್ರಕಾರ ಶೇ.42 ರಷ್ಟು ಸಂಪತ್ತನ್ನು ನಮಗೆ ಹಂಚಿಕೆ ಮಾಡಿದರೆ ಕನಿಷ್ಟ ಎಂದರೂ 1.10 ಲಕ್ಷ ಕೋಟಿಗಳಷ್ಟು ರಾಜ್ಯಕ್ಕೆ ಬರಬೇಕು. ಐಟಿ ಬಿಟಿಯ ಲೆಕ್ಕ ಹಾಕಿದರೆ ಇನ್ನಷ್ಟು ಹೆಚ್ಚು ಬರಬೇಕಾಗುತ್ತದೆ. ಕರ್ನಾಟಕವು  ದಿನದಿಂದ ದಿನಕ್ಕೆ ಸಾಲಗಾರ ರಾಜ್ಯವಾಗುತ್ತಿದೆ. ನಾನು ಅಧಿಕಾರದಿಂದ ಇಳಿದಾಗ ರಾಜ್ಯದ ಸಾಲ [ಕಳೆದ 70 ವರ್ಷಗಳಿಂದ ಮಾಡಿದ್ದು] 2.42 ಲಕ್ಷ ಕೋಟಿಗಳಷ್ಟಿತ್ತು. ಈ ವರ್ಷದ ಅಂತ್ಯಕ್ಕೆ ಸರ್ಕಾರ ದಾಖಲೆಗಳ ಪ್ರಕಾರವೆ ಸುಮಾರು  4.57 ಲಕ್ಷ ಕೋಟಿಗಳಷ್ಟು ಸಾಲವಾಗುತ್ತದೆ.

ಮನಮೋಹನಸಿಂಗ್ ಅವರು ಅಧಿಕಾರದಿಂದ ಇಳಿಯುವ ಸಂದರ್ಭದಲ್ಲಿ [2014 ರ ಮಾರ್ಚ್ 31 ಕ್ಕೆ ] ದೇಶದ ಸಾಲ 53.11 ಲಕ್ಷ ಕೋಟಿ ಇತ್ತು. ಆದರೆ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಈ ವರ್ಷದ ಕಡೆಗೆ 135.87 ಲಕ್ಷ ಕೋಟಿಗಳಾಗುತ್ತದೆಂದು ಮೋದಿಯವರ ಸರ್ಕಾರವೆ ಮಂಡಿಸಿದ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗಿದೆ. ಅಂದರೆ  ಮೋದಿಯವರು 6 ವರ್ಷಗಳಲ್ಲಿ ಮಾಡಿದ ಸಾಲ ಬರೋಬ್ಬರಿ 82.76 ಲಕ್ಷ ಕೋಟಿಗಳು. ದೇಶವು 100 ರೂ ತೆರಿಗೆ ಸಂಗ್ರಹಿಸಿದರೆ 45 ರೂಪಾಯಿಗಳನ್ನು ಸಾಲ ತೀರಿಸಲು ಖರ್ಚು ಮಾಡುತ್ತಿದೆ.

ಮನಮೋಹನಸಿಂಗ್ ಅವರ ಕಾಲದಲ್ಲಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ  ಕಚ್ಛಾ ತೈಲ ಬೆಲೆ ಬ್ಯಾರೆಲ್ ಒಂದಕ್ಕೆ 125-140 ಡಾಲರ್ ಗಳಿಗೆ ಏರಿಕೆಯಾಗಿತ್ತು. ಅಲ್ಲಿ ಬೆಲೆ ಕಡಿಮೆ ಆಗುವವರೆಗೂ ಜನರ ಮೇಲೆ ತೆರಿಗೆ ಹೊರೆ ಹೊರಿಸಬಾರದೆಂಬ ಕಾರಣದಿಂದ ತೈಲ ಬಾಂಡುಗಳನ್ನು ಮನಮೋಹನಸಿಂಗರ ಸರ್ಕಾರವೂ ಖರೀದಿಸಿತ್ತು. ಈ ಬಾಂಡುಗಳ ಒಟ್ಟಾರೆ ಬೆಲೆ 1.31 ಲಕ್ಷ ಕೋಟಿ ಮಾತ್ರ. ಈ ಬಾಂಡುಗಳ ಬಾಕಿಯನ್ನು  ಮೋದಿಯವರ ಸರ್ಕಾರ 2015 ರಲ್ಲಿ ಕೇವಲ 3500 ಕೋಟಿ ರೂಪಾಯಿಗಳನ್ನು ಮಾತ್ರ ತೀರಿಸಿದೆ. ಬಡ್ಡಿ ಮೊತ್ತವನ್ನು ವರ್ಷಕ್ಕೆ 9.5 ಸಾವಿರ ಕೋಟಿಗಳನ್ನು ತೀರಿಸಿದೆ. ಒಟಾರೆ 2024 ರವರೆಗೆ ಮೋದಿಯವರ ಸರ್ಕಾರವು ತೀರಿಸಬೇಕಾಗಿರುವುದು ಸುಮಾರು 90 ಸಾವಿರ ಕೋಟಿರೂಗಳನ್ನು ಮಾತ್ರ. 2024 ರಲ್ಲಿ ಆಯ್ಕೆಯಾಗುವ ಸರ್ಕಾರವು ಸುಮಾರು 90 ಸಾವಿರ ಕೋಟಿ ರೂಗಳನ್ನು ಪಾವತಿಸಬೇಕಿರುವುದು.

ಆದರೆ ಮೋದಿಯವರ ನೇತೃತ್ವದ ಸರ್ಕಾರ ಜನರಿಂದ ಎಕ್ಸೈಜ್ ಡ್ಯೂಟಿಯ ನೆಪದಲ್ಲಿ ಸಂಗ್ರಹಿಸಿರುವ ಮೊತ್ತ ಅಂದಾಜು 20 ಲಕ್ಷ ಕೋಟಿಗಳಷ್ಟಾಗುತ್ತದೆ. 2020 ರಲ್ಲೆ 3.35 ಲಕ್ಷ ಕೋಟಿಗಳನ್ನು ಸಂಗ್ರಹಿಸಿದೆ. ಕಳೆದ 6 ವರ್ಷಗಳಲ್ಲಿ ಕರ್ನಾಟಕವೊಂದರಿಂದಲೆ ಸುಮಾರು 1.20 ಲಕ್ಷ ಕೋಟಿ ರೂಪಾಯಿಗಳನ್ನು  ಪೆಟ್ರೋಲ್, ಡೀಸೆಲ್‍ಗಳ ಬಾಬತ್ತಿನಿಂದ ಸಂಗ್ರಹಿಸಿದೆ. ಈ ಎಲ್ಲ ವಿಚಾರಗಳನ್ನು ಬಚ್ಚಿಟ್ಟು ಕಾಂಗ್ರೆಸ್ ಪಕ್ಷದ ಮೇಲೆ, ನೆಹರೂ, ಮನಮೋಹನ್ ಸಿಂಗ್ ಅವರ ಕುರಿತು ಸುಳ್ಳುಗಳನ್ನು ಉತ್ಪಾದಿಸಿ ಹಂಚುವುದೇ ಬಿಜೆಪಿ ಕೆಲಸವಾಗಿದೆ.

ವಾಜಪೇಯಿಯವರ ಆಡಳಿತದ ಕಡೆಯ ವರ್ಷದಲ್ಲಿ ತೆರಿಗೆ ಸಂಗ್ರಹವು ಹೀಗಿತ್ತು; ದೇಶವು ನೂರು ರೂಪಾಯಿ ತೆರಿಗೆ ಸಂಗ್ರಹಿಸಿದರೆ ಅದರಲ್ಲಿ ಜನರಿಂದ 72 ರೂಪಾಯಿಗಳನ್ನು, ಕಾರ್ಪೊರೇಟ್ ಬಂಡವಾಳಿಗರಿಂದ ಕೇವಲ 28 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದರು. ಮನಮೋಹನಸಿಂಗರು ಅಧಿಕಾರಕ್ಕೆ ಬಂದ ಮೇಲೆ ಈ ತೆರಿಗೆಯನ್ನು ಅತ್ಯಂತ ಮೌನವಾಗಿಯೆ ಬದಲಾಯಿಸಿದ್ದರು. 2010 ರ ವೇಳೆಗೆ ಜನರು ಕಟ್ಟುವ ತೆರಿಗೆ 72 ರೂಪಾಯಿನಿಂದ  58 ರೂಗಳಿಗೆ ಇಳಿದಿತ್ತು. ಕಾರ್ಪೊರೇಟ್ ಬಂಡವಾಳಿಗರು ಕಟ್ಟುವ ತೆರಿಗೆ 28 ರೂಗಳಿಂದ 40 ರೂಪಾಯಿಗೆ ಏರಿಕೆಯಾಗಿತ್ತು.

ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಈಗ ಜನರಿಂದ ಮತ್ತೆ 75 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದಾರೆ. ಕಾರ್ಪೊರೇಟ್ ಬಂಡವಾಳಿಗರಿಂದ ಕೇವಲ 25 ರೂಪಾಯಿಗಳನ್ನು ಸಂಗ್ರಹಿಸುತ್ತಿದ್ದಾರೆ. ಇದನ್ನು ನೋಡಿದರೆ ಸಾಕು ಬಿಜೆಪಿಯವರು ಯಾರ ಪರ ಎಂದು ಅರ್ಥವಾಗುತ್ತದೆ.

ಕೇಂದ್ರ ಸರ್ಕಾರ ರಾಜ್ಯಗಳ ತೆರಿಗೆ ಅಧಿಕಾರಗಳನ್ನು ಕಿತ್ತುಕೊಂಡು ಗುಜರಾತ್ ಮುಂತಾದ ಉತ್ತರದ ರಾಜ್ಯಗಳಿಗೆ ಹೆಚ್ಚು ಅನುದಾನ ನೀಡುತ್ತಿದೆ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ನಮ್ಮ ರಾಜ್ಯದಿಂದ ಆಯ್ಕೆಯಾದ 25 ಜನ ಸಂಸದರುಗಳಲ್ಲಿ ಒಬ್ಬರೂ ಸಹ ಪ್ರಶ್ನಿಸುತ್ತಿಲ್ಲ, ರಾಜ್ಯದ ಮೇಲಿನ ಕೇಂದ್ರದ ದಮನವನ್ನು ಪ್ರತಿಭಟಿಸುತ್ತಿಲ್ಲ. ರಾಜ್ಯದ ಬಿಜೆಪಿ ಸರ್ಕಾರವೂ ಪ್ರಶ್ನಿಸುತ್ತಿಲ್ಲ. ಹಾಗಾಗಿ ಮೋದಿಯವರ ಸರ್ಕಾರವು ದೇಶದಲ್ಲಿಯೆ ಅನೇಕ ವಿಚಾರಗಳಲ್ಲಿ ಮುಂದುವರೆದಿದ್ದ ಕರ್ನಾಟಕ ರಾಜ್ಯವನ್ನು ತುಳಿದು ನರಕಕ್ಕೆ ತಳ್ಳಲು ಪ್ರಯತ್ನಿಸುತ್ತಿದೆ.

ಈ ರೀತಿಯ ಅನೇಕ ಸತ್ಯಗಳನ್ನು ಅಧ್ಯಯನ ಮಾಡಿ ತಾವುಗಳು ಜನರಿಗೆ ತಿಳಿ ಹೇಳಿ ಅರಿವನ್ನು ಉಂಟು ಮಾಡಬೇಕು. ಸುಳ್ಳಿನ ಕಾರ್ಖಾನೆಯಾದ ಬಿಜೆಪಿಯ ಎದುರು ಸತ್ಯದ ದೀಪವನ್ನು ಹಚ್ಚಿ ,  ದೇಶವನ್ನು ರಾಹು ಕೇತುಗಳಂತೆ ಆವರಿಸಿಕೊಂಡಿರುವ ಬಿಜೆಪಿಯನ್ನು ಸಂಪೂರ್ಣ ತೊಲಗಿಸಬೇಕೆಂದು ಕೋರುತ್ತೇನೆ ಎಂದು ಪತ್ರದಲ್ಲಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

ENGLISH SUMMARY…

BJP is a factory of lies: Create awareness among the people by revealing truth – former CM Siddaramaiah
Bengaluru, August 16, 2021 (www.justkannada.in): “BJP is a factory of lies. Try to create awareness among the people by revealing the truth,” observed former Chief Minister and leader of the opposition in the Assembly Siddaramaiah.
In a letter addressed to the Mysuru District Congress Party President, Siddaramaiah has informed that the real solution to all the existing problems in defeating BJP by exposing all its lies and cruelty against mankind. To do that, all the party leaders and workers should study and understand properly.
He also mentioned that he is sending three books written by him titled, “Janapeedaka Sarkara,’ ‘Aidu Kaydegalu-Asankhyaata Sullugalu,” and “Petrol, Diesel Nooru-Janara Baduku Nuchchunooru,” to study. “Please read them thoroughly and print and distribute them as per your requirement,” he has advised.
Keywords: Leader of opposition/ Siddaramaiah/ BJP/ factory of lies/ defeat/ reveal truth

Key words: BJP- lies –factory-aware – truth – former CM -Siddaramaiah