ಬಿಜೆಪಿ-ಜೆಡಿಎಸ್ ಮೈತ್ರಿ ತಾತ್ಕಾಲಿಕವಲ್ಲ, ಮುಂದುವರೆಯಲಿದೆ- ಮಾಜಿ ಸಿಎಂ ಹೆಚ್.ಡಿಕೆ.

ಬೆಂಗಳೂರು, ಮಾರ್ಚ್, 29,2024(www.justkannada.in):  ಬಿಜೆಪಿ-ಜೆಡಿಎಸ್ ಮೈತ್ರಿ ತಾತ್ಕಾಲಿಕವಲ್ಲ,  ಮುಂದೆಯೂ ಮೈತ್ರಿ ಮುಂದುವರೆಯಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ಇಂದು ಖಾಸಗಿ ಹೋಟೆಲ್ ನಲ್ಲಿ ನಡೆದ ಬಿಜೆಪಿ-ಜೆಡಿಎಸ್ ರಾಜ್ಯ ಮಟ್ಟದ ಸಮನ್ವಯ ಸಭೆಯಲ್ಲಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ,  ಲೋಕಸಭೆ ಚುನಾವಣೆಗೆ  ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅದರಂತೆ ಮೂರು ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಜೆಪಿ ಬಿಟ್ಟುಕೊಟ್ಟಿದ್ದು, ಉಳಿದ 25 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಜೆಡಿಎಸ್ ಬೆಂಬಲಿಸಲಿದೆ. ಆದರೆ, ಈ ಮೈತ್ರಿಯು ತಾತ್ಕಾಲಿಕವಲ್ಲ, ಮುಂದುವರಿಯಲಿದೆ. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ರಾಜ್ಯದಲ್ಲಿ ಕಾಂಗ್ರೆಸ್  ಗೆಲುವು ಅಸಾಧ್ಯ ಎಂದು ತಿಳಿಸಿದರು.

ಉಭಯ ಪಕ್ಷದ ಸಭೆ ಮಾಡಲು ಆಗಿರಲಿಲ್ಲ. ಆರೋಗ್ಯ ಸಮಸ್ಯೆಯಿಂದ ಈ ಸಭೆ ಮುಂದೂಡಲಾಗಿತ್ತು. ಎರಡೂ ಪಕ್ಷದಲ್ಲಿ ವಿಶ್ವಾಸದ ಮೂಲಕ ಕೆಲಸ ಆಗಬೇಕು. ನಮ್ಮ ಗುರಿ ಕರ್ನಾಟಕದಲ್ಲಿ 28 ಸ್ಥಾನಗಳನ್ನ ಗೆಲ್ಲುವುದಾಗಿದೆ ಎಂದು ತಿಳಿಸಿದರು.

ಮೈತ್ರಿಯಿಂದಾಗಿ ಕಾಂಗ್ರೆಸ್‌ ಗೆ ಅಂದೇ ಭಯ ಶುರುವಾಗಿದೆ. ಇದು ತಾತ್ಕಾಲಿಕ ಮೈತ್ರಿ ಅಲ್ಲ, ಇನ್ನೂ ಮುಂದೆ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಇದು ರಾಜ್ಯದ ಅಭಿವೃದ್ಧಿ ಮೈತ್ರಿಯಾಗಿದೆ. ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕನಿಷ್ಠ 25 ಸಾವಿರ ಮತಗಳ ಲೀಡ್ ಕೊಡಿಸುತ್ತೇನೆ. ಎರಡೂ ಪಕ್ಷಗಳ ಸಂಶಯಕ್ಕೆ ಒಳಗಾಗದೇ ಒಟ್ಟಾಗಿ ಹೋಗುತ್ತೇವೆ. ನಮ್ಮ ಕಾರ್ಯಬದ್ಧತೆಯಲ್ಲಿ ಕಿಂಚಿತ್ತೂ ಅಡ್ಡಿ ಆಗಬಾರದು. ಸಣ್ಣಪುಟ್ಟ ಸಮಸ್ಯೆ ಇದ್ದರೆ ಉಸ್ತುವಾರಿಗಳ ಗಮನಕ್ಕೆ ತನ್ನಿ. ಇದು ತಾತ್ಕಾಲಿಕ ಮೈತ್ರಿ ಅಲ್ಲ, ಮುಂದೆಯೂ ಮುಂದುವರೆಯಬೇಕು ಎಂಬ ಉದ್ದೇಶ ಇದೆ  ಎಂದು ಹೆಚ್.ಡಿಕೆ ಹೇಳಿದರು.

Key words: BJP, JDS, alliance, H.D Kumaraswamy