ಬಿಜೆಪಿ ಪರಿಶಿಷ್ಟರ ಕಲ್ಯಾಣದ ಪರ ಇಲ್ಲ: ಬರೀ ಕಾರ್ಪೊರೇಟ್ ಕಂಪನಿಗಳ ಪರ- ಸರ್ಕಾರದ ವಿರುದ್ದ ಸಿದ್ಧರಾಮಯ್ಯ ವಾಗ್ದಾಳಿ.

ಬೆಂಗಳೂರು,ಫೆಬ್ರವರಿ,26,2022(www.justkannada.in): ಬಿಜೆಪಿ ಸರ್ಕಾರ ಯಾರ ಪರ ಇದೆ. ಬರೀ ಕಾರ್ಪೊರೇಟ್ ಕಂಪನಿಗಳ ಪರ ಇದ್ಧಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ (ದಸಂಸ ಒಕ್ಕೂಟ) ಬೆಂಗಳೂರಿನ  ಲಿಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ “ಎಸ್ ಸಿ ಪಿ/ ಟಿ ಎಸ್ ಪಿ ಕಡ್ಡಾಯ ಅನುಷ್ಠಾನ” ಕುರಿತ ಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಹೇಳಿದ್ದಿಷ್ಟು.

ಬಿಜೆಪಿ ಸರ್ಕಾರ ಎಸ್ ಸಿಪಿ/ ಟಿಎಸ್ ಪಿ ಕಾಯ್ದೆ ಪರ ಇದೆಯೇ?.‌ ನಾನು ಸಿಎಂ ಆಗಿದ್ದಾಗ ಮಂಡಿಸಿದ್ದ ಬಜೆಟ್ 2 ಲಕ್ಷ ಎರಡು ಸಾವಿರ ಕೋಟಿ. ಆಗ ಎಸ್ ಸಿಪಿ, ಟಿಎಸ್ ಪಿಗೆ ಇಟ್ಟಿದ್ದ ಹಣ 29 ಸಾವಿರ ಕೋಟಿ. ಈಗ ಬಜೇಟ್ ಗಾತ್ರ 2ಲಕ್ಷ 47 ಸಾವಿರ 207 ಕೋಟಿ. ಆದರೆ scp, tsp ಗೆ ಇಟ್ಟ ಹಣ 26 ಸಾವಿರ ಕೋಟಿ ಮಾತ್ರ.‌ ಬಿಜೆಪಿ ಪರಿಶಿಷ್ಟರ ಕಲ್ಯಾಣದ ಪರವಾಗಿ ಇಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ಯಾರ ಪರ ಇದೆ. ಬರೀ ಕಾರ್ಪೊರೇಟ್ ಕಂಪನಿಗಳ ಪರ.

ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂತಾರೆ ಮೋದಿ. ಕಹಾ ಹೈ ಮೋದಿ ಸಬ್ ಕಾ ಸಾತ್ ಸಬ್ ಕಾ ವಿನಾಶ್ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ,  ಎಸ್ ಟಿಪಿ, ಟಿಎಸ್ ಪಿ ಕಾಯಿದೆಯ ಅನುಷ್ಠಾನ ಕುರಿತು ದೇಶದೆಲ್ಲೆಡೆ ಚರ್ಚೆ ಆಗಬೇಕು. ಅಂಬೇಡ್ಕರ್ ಒಂದು ಮಾತು ಹೇಳಿದ್ದರು . ಮತ ಹಾಕುವ ಸ್ವಾತಂತ್ರ್ಯ ಸಿಕ್ಕರೆ ಸಾಲದು.‌ ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎಂದು. ಆಗ ಮಾತ್ರ ಜಾತ್ಯಾತೀತ ಸಮಾಜ ನಿರ್ಮಾಣವಾಗುತ್ತೆ.

ನಮ್ಮ ಸಮಾಜ ಅಸಮಾನತೆಯಿಂದ ಕೂಡಿದೆ. ಈ ಅಸಮಾನತೆ ಹೋಗಲಾಡಿಸಬೇಕು.‌ ದೇಶದ ಸಂಪತ್ತು, ಶಿಕ್ಷಣ ಹಂಚಿಕೆಯಾಗಬೇಕು‌. ಶಿಕ್ಷಣ ಬಹಳ ಮುಖ್ಯ ಎಂದೂ ಅಂಬೇಡ್ಕರ್ ಅವರು ಹೇಳಿದ್ದರು. ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು ಅಂದ್ರೆ ಶಿಕ್ಷಣ ಮುಖ್ಯ  ೨೪.೧ % ಎರಡು ಸಮುದಾಯಕ್ಕೆ ಮೀಸಲಾತಿ ಇದೆ.‌ ೨೦೧೩ ರಲ್ಲಿ ಈ ಕಾಯಿದೆ ಜಾರಿಗೆ ಬಂತು.‌ ಕಾಯಿದೆ ಜಾರಿಗೆ ತಂದ ದೇಶದಲ್ಲೇ ಎರಡನೇ ರಾಜ್ಯ ನಮ್ಮದು.

ಬಸವಣ್ಣನವರ ವಚನಗಳನ್ನ ೮೦೦ ವರ್ಷಗಳಿಂದ ಹೇಳ್ತಾನೇ ಬಂದಿದ್ದಾರೆ.‌ ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ, ನಮ್ಮ ಮನೆ ಮಗನೆಂದಿಣಸಯ್ಯ ಎಂದು ವಚನ ಹೇಳ್ತಾರೆ.. ನಂತರ ಪಕ್ಕಕ್ಕೆ ಬಂದು ನೀನು ಯಾವ ಜಾತಿ ಅಂತ ಕೇಳ್ತಾರೆ.‌ ಮೇಲ್ ಜಾತಿನಾ, ಕೆಳ ಜಾತಿನಾ ಎಂದು ಕೇಳ್ತಾರೆ.

ನಮ್ಮಲ್ಲಿ ಗುಲಾಮಗಿರಿ, ಜಾತಿ ವ್ಯವಸ್ಥೆ ಇದೆ.‌ ಗುಲಾಮಗಿರಿ ಮನಸ್ಥಿತಿ ಹೋಗಬೇಕು.‌ ಮೇಲ್ಜಾತಿಯವರು  ಬಡವ ಆದ್ರೂ ಗೌರವದಿಂದ ಮಾತನಾಡಿಸುತ್ತಾರೆ.‌ ಆದ್ರೆ ದಲಿತ ಶ್ರೀಮಂತನಾದ್ರೂ ಅವ್ರನ್ನ ಬೇರೆಯದ್ದೇ ರೀತಿ ಮಾತನಾಡಿಸುತ್ತಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಮನೆ ಇಲ್ಲದ ದಲಿತರು‌ ಅರ್ಜಿ ಹಾಕಿದಾಗ ಸೂರು ಕೊಡಬೇಕು ಅಂತ ನಾನು ಕಾನೂನು ಮಾಡಿದ್ದೆ. ಬಿಜೆಪಿ ಸರ್ಕಾರ, ಸಮ್ಮಿಶ್ರ ಸರ್ಕಾರ ಸೇರಿ ಅಧಿಕಾರಕ್ಕೆ ಬಂದು ಮೂರುವರೆ  ವರ್ಷ ಆಯ್ತು. ಬಜೆಟ್ ಈಗ ಏನ್ ಮಾಡ್ತಾರೊ ಗೊತ್ತಿಲ್ಲ. ಎಲ್ಲಾದಕ್ಕೂ ದುಡ್ಡು ಇಲ್ಲ ಅಂತಾರೆ.‌ ಏನೇ ಕೇಳಿದ್ರು ಕೋವಿಡ್ ಅಂತಾರೆ. ಕೋವಿಡ್ ಗೆ ಖರ್ಚಾಗಿದ್ದು 8 ಸಾವಿರ ಕೋಟಿ .

ಕೇಂದ್ರ ಸರ್ಕಾರದಿಂದ ಬರುವ  ಹಣಕಾಸು ನೆರವಿನ‌ ಪ್ರಮಾಣ  ಕಡಿಮೆ ಆಗ್ತಿದೆ.‌ ಮೋದಿ ಬಂದ ಮೇಲೆ ಹೀಗಾಗ್ತಿದೆ. ರಾಜ್ಯದಿಂದ ಮೂರು ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗುತ್ತಿದೆ. ಅನುದಾನ ಸೇರಿ ಮೊದಲು ನಮಗೆ ಕೇಂದ್ರದ ಪಾಲು 80  ಸಾವಿರ ಕೋಟಿ ಬರ್ತಿತ್ತು. ಈಗ 40 ಸಾವಿರ ಕೋಟಿ ಬರ್ತದೆ. ಕೇಂದ್ರದಿಂದ ಹಣ ತರದೆ ಇಲ್ಲಿ ಕೋವಿಡ್ ಕಾರಣ ಹೇಳ್ತಾರೆ. ನಮಗೆ ಕೇಂದ್ರದಿಂದ ಸರಿ ಸುಮಾರು 1ಲಕ್ಷ 20 ಸಾವಿರ ಕೋಟಿ ಬರಬೇಕು. ಮುಖ್ಯಮಂತ್ರಿ, ಮಂತ್ರಿಗಳು, ಸಂಸದರು‌ ಪ್ರಧಾನಿಯವರನ್ನು ಕೇಳದೇ ಹೆದರಿಕೊಂಡು ಹೇಡಿಗಳ ತರ ಕುಳಿತಿದ್ದಾರೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

Key words: BJP-former CM-  Siddaramaiah