ಕೋಮುವಾದ ಕೆರಳಿಸುವ ಬಿಜೆಪಿ ಯತ್ನ ವಿಫಲ- ಶಾಸಕ ದಿನೇಶ ಗೂಳಿಗೌಡ

ಮಂಡ್ಯ,ಜನವರಿ,29,2024(www.justkannada.in): ಮಂಡ್ಯದಲ್ಲಿ ಕೋಮುವಾದದ ವಿಷ ಬೀಜ ಬಿತ್ತಿ, ರಾಜಕೀಯ ಪ್ರಯೋಜನ ಪಡೆಯಲು ಹೊರಟ ಬಿಜೆಪಿ ಹಾಗೂ ಮಿತ್ರ ಪಕ್ಷಗಳ ಪ್ರಯತ್ನ ವಿಫಲವಾಗಲಿದೆ. ಇದು ಖಂಡಿತವಾಗಿಯೂ ಯಶ ಕಾಣದು. ಕಾಂಗ್ರೆಸ್‌ ನ ಜನಪರ ಯೋಜನೆ, ಕಾಳಜಿ ಬಗ್ಗೆ ಜನರು ಈಗಾಗಲೇ ಅರ್ಥ ಮಾಡಿಕೊಂಡಿದ್ದಾರೆ. ಕೋಮುವಾದಕ್ಕೆ ನಮ್ಮ ಜನ ಸೊಪ್ಪು ಹಾಕುವುದಿಲ್ಲ ಎಂದು ಕೆಪಿಸಿಸಿ ಮಾಧ್ಯಮ ಘಟಕದ ಉಪಾಧ್ಯಕ್ಷರು, ಶಾಸಕರಾದ ದಿನೇಶ ಗೂಳಿಗೌಡ ಹೇಳಿದ್ದಾರೆ.

ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ್‌ ಗೂಳಿಗೌಡ, ಮಂಡ್ಯದ ಕೆರಗೋಡು ಗ್ರಾಮದಲ್ಲಿ ರಾಷ್ಟ್ರ ಧ್ವಜ, ಕನ್ನಡ ಧ್ವಜ ಹಾರಿಸಲು ಗ್ರಾಪಂನಿಂದ ಅನುಮತಿ ಪಡೆದು, ಆ ಧ್ವಜದ ಕಟ್ಟೆಯ ಮೇಲೆ ಕೇಸರಿ ಬಾವುಟ ಹಾಗೂ ಹನುಮ ಧ್ವಜ ಹಾರಿಸಲಾಗಿತ್ತು. ಜಿಲ್ಲಾಡಳಿತ ಆ ಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದೆ. ಜಿಲ್ಲಾಡಳಿತ ಸಂವಿಧಾನದ ಆಶಯದಂತೆ ಕಾನೂನಾತ್ಮಕವಾಗಿ ನಡೆದುಕೊಂಡಿದೆ. ಆದರೆ, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಜೆಡಿಎಸ್ ಅದನ್ನು ಕೋಮುವಾದೀಕರಣಗೊಳಿಸಿ ರಾಜಕೀಯ ಪ್ರಯೋಜನ ಪಡೆಯಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಖಂಡಿತಾ ಯಶಸ್ವಿಯಾಗದು

ಮಂಡ್ಯ ಎಂಬುದು ಸ್ವಾತಂತ್ರ್ಯ ಹೋರಾಟದ ನೆಲೆಯಾಗಿದೆ. ಇಲ್ಲಿ ಅನೇಕ ಮಹನೀಯರು ಆಳಿದ್ದಾರೆ. ಹೋರಾಟದ ನಾಡು ನಮ್ಮದು ಎಂಬುದನ್ನು ಯಾರೂ ಸಹ ಮರೆಯಬಾರದು. ಎಚ್.ಕೆ.ವೀರಣ್ಣ ಗೌಡ್ರು, ಎಸ್.ಎಂ.ಕೃಷ್ಣ ಅವರು, ಕೆ.ವಿ.ಶಂಕರೇಗೌಡ್ರು, ಅಂಬರೀಶ್. ಚೌಡಯ್ಯ. ಎಸ್.ಡಿ.ಜಯರಾಂ ಅವರು‌, ಜಿ.ಮಾದೇಗೌಡರು ಸೇರಿದಂತೆ ಅನೇಕ ನಾಯಕರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಈ ನೆಲೆದಲ್ಲಿ ಮಾಡಿದ ಘಟಾನುಘಟಿ ನಾಯಕರ ತವರು ಜಿಲ್ಲೆ ಇದಾಗಿದೆ. ಈಗ ಇಂತಹ ನಾಡಿನಲ್ಲಿ ಬಿಜೆಪಿ ಮತ್ತು ಅವರ ಮಿತ್ರ ಪಕ್ಷ ಜೆಡಿಎಸ್ ಕೋಮುವಾದದ ವಿಷ ಬೀಜ ಬಿತ್ತಲು ಯತ್ನಿಸುತ್ತಿದೆ. ಅದು ಖಂಡಿತಾ ಯಶಸ್ವಿಯಾಗದು   ಎಂದು ಶಾಸಕ ದಿನೇಶ್‌ ಗೂಳಿಗೌಡ ಹೇಳಿದರು.

ಜನರಿಗೆ ನೆರವಾಗುತ್ತಿರುವ ಗ್ಯಾರಂಟಿ ಯೋಜನೆಗಳು

ಮಂಡ್ಯದ ಜನ ಬಹಳ ಪ್ರಜ್ಞಾವಂತರಿದ್ದಾರೆ. ಇಲ್ಲಿ ಶೇ. 100ರಲ್ಲಿ 90 ರಷ್ಟು ರೈತರಿದ್ದಾರೆ. ಅವರನ್ನು ಕೆರಳಿಸಬೇಕು. ಕೋಮು ವಾತಾವರಣ ನಿರ್ಮಾಣ ಎಂದು ಬಿಜೆಪಿ ನಾಯಕರು ಪ್ರಚೋದನೆ ಮಾಡುತ್ತಿದ್ದಾರೆ. ಬಿಜೆಪಿ ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಲು ಹೊರಟಿದೆ. ಕಾಂಗ್ರೆಸ್ ಜನರ ಬದುಕನ್ನು ಕಟ್ಟಲು ಹೊರಟಿದೆ. ಅದಕ್ಕಾಗಿಯೇ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿಯಂಥ ಯೋಜನೆಯಿಂದ ಲಕ್ಷಾಂತರ ಬಡವರ ಬದುಕಿಗೆ ನೆರವಾಗುವುತ್ತಿದೆ. ಬರ ಇದ್ದರೂ ಜನ ನೆಮ್ಮದಿ ಬದುಕು ನಡೆಸುವಂತೆ ಮಾಡಿದೆ ಎಂದು ದಿನೇಶ್‌ ಗೂಳಿಗೌಡ ವಿವರಿಸಿದರು.

ಪ್ರತಿ ಮನೆಗೂ ಗ್ಯಾರಂಟಿ ಫಲ

ಶಕ್ತಿ ಯೋಜನೆಯಲ್ಲಿ ಮಂಡ್ಯ ಜಿಲ್ಲೆಯ ವ್ಯಾಪ್ತಿಯೊಂದರಲ್ಲಿಯೇ ಕಳೆದ ಜೂನ್ ನಿಂದ ಡಿಸೆಂಬರ್ ವರೆಗೆ 3 ಕೋಟಿ 57 ಲಕ್ಷ ಮಹಿಳಾ ಪ್ರಯಾಣಿಕರಿಗೆ ಉಚಿತ ಟಿಕೆಟ್ ನೀಡಲಾಗಿದೆ. ಅದರ ವೆಚ್ಚ 89 ಕೋಟಿ 17 ಲಕ್ಷ ರೂ.ಗಳಾಗಿವೆ. ಪ್ರತಿ ದಿನ ಸರಾಸರಿ 2.04 ಲಕ್ಷ ಮಹಿಳಾ ಪ್ರಯಾಣಿಕರು ಹಣ ನೀಡದೇ ಬಸ್ ಗಳಲ್ಲಿ ಸಂಚರಿಸುತ್ತಿದ್ದು, ಅವರಿಗೆ ಸರಾಸರಿ 45.57 ಲಕ್ಷ ರೂ.‌”ಉಚಿತ” ಟಿಕೆಟ್ ನೀಡಲಾಗುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ 4 ಲಕ್ಷ 47 ಸಾವಿರ ಮನೆಗಳ ಯಜಮಾನಿಯರು ಗೃಹಲಕ್ಷ್ಮಿ ಯೋಜನೆಯಡಿ  ನೋಂದಾಯಿಸಿಕೊಂಡು ಮಾಸಿಕ ತಲಾ 2 ಸಾವಿರ ರೂ. ಪ್ರಯೋಜನ ಪಡೆಯುತ್ತಿದ್ದಾರೆ. ಒಟ್ಟಾರೆ ಅರ್ಹ ಫಲಾನುಭವಿಗಳ ಶೇ.92.23 ರಷ್ಟು ಕುಟುಂಬಗಳು ಇದುವರೆಗೆ ಪ್ರಯೋಜನ ಪಡೆದಿವೆ. ಗೃಹ ಜ್ಯೋತಿ ಯೋಜನೆಯಲ್ಲಿ 4 ಲಕ್ಷ 64 ಸಾವಿರ ಕುಟುಂಬಗಳು (ಶೇ.92.30) ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಬಿಲ್ ಪಡೆಯುತ್ತಿವೆ.

ಅನ್ನಭಾಗ್ಯ ಯೋಜನೆಯಲ್ಲಿ ಮಾಸಿಕ 5 ಕೆಜಿ ಅಕ್ಕಿಯ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ 4,36,510 ಕುಟುಂಬಗಳ ಬ್ಯಾಂಕ್ ಖಾತೆಗೆ ಒಟ್ಟು 23.79 ಕೋಟಿ ರೂ. ಜಮಾ ಮಾಡಲಾಗಿದೆ.

ಯುವ ನಿಧಿ ಯೋಜನೆಯಲ್ಲಿ ನಿರುದ್ಯೋಗ ಭತ್ಯೆ ಪಡೆಯಲು 4014 ಅರ್ಹ ಫಲಾನುಭವಿಗಳಿದ್ದು, ಇದುವರೆಗೆ ಶೇ.65 ರಷ್ಟು ಎಂದರೆ 2587 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಶೀಘ್ರದಲ್ಲಿ ಅವರೆಲ್ಲರಿಗೂ ಮಾಸಾಶನ ದೊರೆಯಲಿದೆ ಎಂದು ದಿನೇಶ್‌ ಗೂಳಿಗೌಡ ಹೇಳಿದರು.

ಒಟ್ಟಾರೆ ನೋಡಿದಾಗ  ಜಿಲ್ಲೆಯ ಪ್ರತಿ ಕುಟುಂಬವೂ ರಾಜ್ಯ ಸರ್ಕಾರದ ಒಂದಲ್ಲ ಒಂದು ರೀತಿಯ ಗ್ಯಾರಂಟಿ ಯೋಜನೆಯ ಫಲಾನುಭವಿಯಾಗಿದೆ.‌ ನಾಲ್ಕು ಗ್ಯಾರಂಟಿ ಯೋಜನೆಗಳು ಒಟ್ಟಾರೆ ಅರ್ಹ ಫಲಾನುಭವಿಗಳ  ಶೇ.90 ಕ್ಕೂ ಅಧಿಕ ಜನರಿಗೆ ತಲುಪುತ್ತಿವೆ. ಪ್ರತಿ  ಬಡ ಕುಟುಂಬವು ಮಾಸಿಕ ಕನಿಷ್ಠ 4 ರಿಂದ 5 ಸಾವಿರ ರೂ.ಗಳಷ್ಟು ಗ್ಯಾರಂಟಿ ಯೋಜನೆಯ ಲಾಭ ಪಡೆಯುತ್ತಿದೆ. ಒಟ್ಟಾರೆ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಿ ಕಾಂಗ್ರೆಸ್ ಸರ್ಕಾರ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದೆ ಎಂದು ದಿನೇಶ್‌ ಗೂಳಿಗೌಡ ತಿಳಿಸಿದರು.

ಸಿಎಂ, ಡಿಸಿಎಂ ಅವರಿಂದ ಅಭಿವೃದ್ಧಿಯ ಕರ್ನಾಟಕ ನಿರ್ಮಾಣ

ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವುದೇ ಅಭಿವೃದ್ಧಿ ಮಾಡಿಲ್ಲ. ಈಗ  ಚುನಾವಣೆಗೋಸ್ಕರ ಧ್ವಜ ರಾಜಕಾರಣ ಮಡುತ್ತಿದೆ. ಸಿಎಂ ಸಿದ್ದರಾಮಯ್ಯ ,ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಸದೃಢವಾಗಿದೆ. ಅಭಿವೃದ್ಧಿಯ ಕರ್ನಾಟಕವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಈ ಯತ್ನದಲ್ಲಿ ಯಶಸ್ಸು ಸಿಗದು. ಯಾವುದೇ ಆಧಾರವಿಲ್ಲದ ಕಾರಣ ಈ ಧ್ವಜ ವಿವಾದದಲ್ಲಿ ನ್ಯಾಯಕ್ಕೆ ಜಯವಾಗಲಿದ್ದು, ಬಿಜೆಪಿಗರು ನಿರಾಶರಾಗುತ್ತಾರೆ ಎಂದು ದಿನೇಶ ಗೂಳಿಗೌಡ ಹೇಳಿದ್ದಾರೆ.

ಚಲುವರಾಯಸ್ವಾಮಿ ಅವರಿಂದ ಜಿಲ್ಲೆಯ ಅಭಿವೃದ್ಧಿ

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿನ ಮೈಸೂರು ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ಶ್ರಮವಹಿಸಿದ್ದಾರೆ. ಇದರ ಮುಂದಾಳತ್ವ ವಹಿಸುವ ಮೂಲಕ ಅವರು 50 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿಸಿದ್ದಾರೆ. ಇದರಿಂದ ಜಿಲ್ಲೆಯ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ಇಲ್ಲಿ ಯಾವುದೇ ಜಾತಿ ಭೇದ, ಪಕ್ಷ ಭೇದ ಮಾಡದೆ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರಿಗೂ ಅನ್ವಯವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಕಾರ್ಯನಿರ್ವಹಣೆ ಮಾಡುತ್ತಿದೆ. ನಾಗರಿಕರ ಅಭ್ಯುದಯಕ್ಕೆ ನಮ್ಮ ಸಚಿವರಾದ ಚಲುವರಾಯಸ್ವಾಮಿ ಅವರು ಬದ್ಧರಾಗಿದ್ದಾರೆ. ಜನರಿಗೆ ಸಹ ಪ್ರತಿಪಕ್ಷಗಳ ಈ ಕುತಂತ್ರದ ಬಗ್ಗೆ ಅರ್ಥವಾಗಿದೆ ಎಂದು ದಿನೇಶ್‌ ಗೂಳಿಗೌಡ ಹೇಳಿದ್ದಾರೆ.

Key words: BJP- attempt – provoke-communalism- failed – MLA -Dinesh Gooligowda.