ಸುಲಭ ಶೌಚಾಲಯ ಸಂಸ್ಥಾಪಕ ಬಿಂದೇಶ್ವರ ಪಾಠಕ್ ನಿಧನ: ಸಚಿವ ಎಚ್.ಕೆ ಪಾಟೀಲ್ ಸಂತಾಪ.

ಬೆಂಗಳೂರು,ಆಗಸ್ಟ್,16,2023(www.justkannada.in): ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಮನೆಮಾತಾಗಿದ್ದ ಸಾಮಾಜಿಕ ಕಾರ್ಯಕರ್ತ ಸುಲಭ ಶೌಚಾಲಯ ಸಂಸ್ಥಾಪಕ ಬಿಂದೇಶ್ವರ ಪಾಠಕ್ ನಿಧನರಾಗಿದ್ದಾರೆ.

ಬಿಂದೇಶ್ವರ್‌ ಪಾಠಕ್‌ ಅವರಿಗೆ 80 ವರ್ಷವಾಗಿತ್ತು. ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆ ‘ಸುಲಭ್‌ ಇಂಟರ್‌ನ್ಯಾಷನಲ್‌’ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ ಧ್ವಜಾರೋಹಣ ನೆರವೇರಿಸಿದ ಬಳಿಕ ಬಿಂದೇಶ್ವರ ಪಾಠಕ್ ಅಸ್ವಸ್ಥಗೊಂಡು ಕುಸಿದುಬಿದ್ದರು. ತಕ್ಷಣವೇ ಅವರನ್ನು ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪಾಠಕ್‌ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರದಲ್ಲಿ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ಬಿಂದೇಶ್ವರ ಪಾಠಕ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ ಪಾಟೀಲ್,  ಭಾರತೀಯ ಸಮಾಜದಲ್ಲಿ ನಾಗರಿಕತೆಯ ನೈಜ ಕಲ್ಪನೆಗಳನ್ನು ಬಿತ್ತಿ ಆ ಕಲ್ಪನೆಗಳನ್ನು ಸಾಕಾರಗೊಳಿಸಿ,  ಕಾರ್ಯರೂಪಕ್ಕೆ ತಂದು, ನಿರ್ಮಲ ಭಾರತ ನಿರ್ಮಾಣದ ಹೆಜ್ಜೆಗಳಲ್ಲಿ ದಾಪುಗಾಲನ್ನು ಇರಿಸಿದ ಸುಲಭ ಶೌಚಾಲಯ ಸಂಸ್ಥಾಪಕ ಬಿಂಧೇಶ್ವರ ಪಾಠಕ್ ಅವರ ನಿಧನದಿಂದ ಭಾರತೀಯ ನೈರ್ಮಲ್ಯ ವ್ಯವಸ್ಥೆ ಬಡವಾಗಿದೆ.

ರಾಷ್ಟ್ರದಲ್ಲಿ 1970ರ ದಶಕದಿಂದ ಆರಂಭಗೊಂಡು ಇಲ್ಲಿಯವರೆಗೆ 5.4 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಕ್ರಾಂತಿ ಮಾಡಿದ ಬಿಂಧೇಶ್ವರ ಪಾಠ ಇನ್ನು ಭಾರತೀಯ ಜನಮಾನಸದಲ್ಲಿ  ಅಜರಾ ಮರರಾಗಿ ಸ್ಮರಣೆಯಲ್ಲಿ ಉಳಿಯಲಿದ್ದಾರೆ.

ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ 2013 ರಿಂದ 18ರವರೆಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವನಾಗಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಅಂದಿನ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅನುಷ್ಠಾನಗೊಳಿಸುತ್ತಿದ್ದ ನಿರ್ಮಲ ಭಾರತ ಅಭಿಯಾನವನ್ನು ಕರ್ನಾಟಕದಲ್ಲಿ ಜಾರಿಗೊಳಿಸಿದ ಸಂದರ್ಭದಲ್ಲಿ  ಬಿಂದೇಶ್ವರ ಪಾಠಕ್ ಅವರ ನೈರ್ಮಲ್ಯ  ಅಭಿಯಾನ ಪ್ರೇರಕ ಶಕ್ತಿಯಾಗಿತ್ತು. ಪಾಠಕ್ ಅವರೊಂದಿಗೆ ನನ್ನ ವೈಯಕ್ತಿಕ ಸಂಪರ್ಕ ಹಾಗೂ ನೈರ್ಮಲ್ಯದ ಕುರಿತು ಅವರೊಂದಿಗೆ ಕಾಲಕಾಲಕೆ ಚರ್ಚಿಸುವ ಸದಾವಕಾಶ ನನ್ನದಾಗಿತ್ತು.

ಕರ್ನಾಟಕದಲ್ಲಿ 2013 ರಿಂದ 2014ರ ಅವಧಿಯಲ್ಲಿ ಒಂದೇ ವರ್ಷದಲ್ಲಿ 11 ಲಕ್ಷ ಗ್ರಾಮೀಣ ಶೌಚಾಲಯಗಳ ನಿರ್ಮಾಣ ಮಾಡಿದ್ದನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದ ಪಾಠಕ್ ರವರು ನಿರ್ಮಲ ಕರ್ನಾಟಕದ ಪೂರ್ಣ ಅವಶ್ಯಕ ವೈಯಕ್ತಿಕ ಶೌಚಾಲಯಗಳು ಬೇಗ ಪೂರ್ಣಗೊಳ್ಳಲಿ  ಎಂದು ಹಾರೈಸಿದ್ದರು. ಅಕ್ಟೋಬರ್ 2ರ ಗಾಂಧೀ ಜಯಂತಿ ಎಂದು ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ನಿರ್ಮಲ ಕರ್ನಾಟಕ ಅಭಿಯಾನ ಕಾರ್ಯಕ್ರಮದಲ್ಲಿ ಎರಡು ಸಲ ಪಾಲ್ಗೊಂಡು ಗ್ರಾಮೀಣ ಕರ್ನಾಟಕದ ಗ್ರಾಮೀಣ ರಾಜಕೀಯ ಕಾರ್ಯಕರ್ತರಿಗೆ ಶೌಚಾಲಯಗಳ ಕುರಿತು ಮಾರ್ಗದರ್ಶನ ಮಾಡಿದ್ದನ್ನು ನಾನು ಕೃತಜ್ಞತೆಯಿಂದ ನೆನೆಯುತ್ತೇನೆ.

ಅವರ ನಿಧನದಿಂದ ಪಾಠಕ್ ಅವರ ಕುಟುಂಬಕ್ಕೆ ಕಾರ್ಯಕರ್ತರಿಗೆ ಆಗಿರುವ ದುಃಖದಲ್ಲಿ ನಾನು ಭಾಗಿ. ದಯಾಘನನಾದ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ದುಃಖಿತರಾಗಿರುವ ಅವರ ಕುಟುಂಬ ವರ್ಗದವರಿಗೆ ಹಾಗೂ ಇತರರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಚಿವ ಎಚ್.ಕೆ ಪಾಟೀಲ್ ಕಂಬನಿ ಮಿಡಿದಿದ್ದಾರೆ.

Key words: Bindeshwar Pathak  -passed away-Condolences – Minister- HK Patil