ದ್ವಿಭಾಷಾ ನೀತಿಗೆ  ಹಕ್ಕೊತ್ತಾಯ: ಆನ್ಲೈನ್ ಪಿಟಿಶನ್ ಗೆ 50 ಸಾವಿರ ಜನರ ಸಹಿ ಸಂಗ್ರಹ

ಬೆಂಗಳೂರು,ಜುಲೈ,18,2025 (www.justkannada.in):  ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೊಳಿಸಲು ಹಕ್ಕೊತ್ತಾಯ ಮಾಡಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ವೇದಿಕೆಯು ನಡೆಸುತ್ತಿರುವ  260 ದಿನಗಳ ನಿರಂತರ ಹೋರಾಟದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸೃಷ್ಟಿಸಿದೆ.

ದ್ವಿಭಾಷಾ ನೀತಿ ಜಾರಿಗೊಳಿಸಲು  ಆಗ್ರಹಿಸಿ ‘ನಮ್ಮ ನಾಡು ನಮ್ಮ ಆಳ್ವಿಕೆ’ ಆರಂಭಿಸಿರುವ ಆನ್ಲೈನ್ ಪಿಟಿಶನ್” ಈಗ 50,000 ಜನರ ಸಹಿ ಸಂಗ್ರಹವಾಗಿದ್ದು ಸದ್ಯದಲ್ಲೇ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಈ ಪಿಟಿಶನ್ ತಲುಪಿಸುವ ಮೂಲಕ ದ್ವಿಭಾಷಾ ನೀತಿಗಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದೆ.

ಈ ಕುರಿತು ಪ್ರಕಟಣೆ ಮೂಲಕ ಈ ವಿಚಾರ ಹಂಚಿಕೊಂಡಿರುವ ನಮ್ಮ ನಾಡು ನಮ್ಮ ಆಳ್ವಿಕೆ’ ವೇದಿಕೆಯು, ಕಳೆದ ವರ್ಷ ಕನ್ನಡ ಹೋರಾಟಗಾರ ಮಾ. ರಾಮಮೂರ್ತಿ ಅವರ ಜನ್ಮದಿನದಂದು, ನಾವು ಚಾಲನೆ ಕೊಟ್ಟ ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ “ದ್ವಿಭಾಷಾ ನೀತಿ” ಜಾರಿಗೆ ಹೋರಾಟಕ್ಕೆ ಇಂದು 260 ದಿನಗಳು ತುಂಬಿದೆ. ಇದೇ ಸಂದರ್ಭದಲ್ಲಿ ಎರಡು ತಿಂಗಳ ಹಿಂದೆ ನಾವು ಶುರು ಮಾಡಿದ ದ್ವಿಭಾಷಾ ನೀತಿ ಹಕ್ಕೊತ್ತಾಯದ “ಆನ್ಲೈನ್ ಪಿಟಿಶನ್” ಈಗ 50,000 ಜನರ ಸಹಿ ಸಂಗ್ರಹ ದಾಟಿ ಮುನ್ನುಗ್ಗುತ್ತಿದೆ.

“ನಮ್ಮ ನಾಡು ನಮ್ಮ ಆಳ್ವಿಕೆ” ತಂಡವು ಕಳೆದ ಅನೇಕ ತಿಂಗಳಿಂದ ಕರ್ನಾಟಕ ರಾಜ್ಯ ಪಠ್ಯಕ್ರಮದಲ್ಲಿ ದ್ವಿಭಾಷಾ ನೀತಿ ಜಾರಿಯಾಗಬೇಕೆಂದು ಅನೇಕ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಕಳೆದ ವರ್ಷ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ದ್ವಿಭಾಷಾ ನೀತಿಯ ಬಗ್ಗೆ ಜನ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ನಂತರದ ದಿನದಲ್ಲಿ ಬೆಂಗಳೂರು ಮತ್ತು ಧಾರವಾಡದಲ್ಲಿ ಸಾರ್ವಜನಿಕ ಸಭೆಯನ್ನು ಸಹ ಆಯೋಜಿಸಿದ್ದೆವು, ಮತ್ತು ಶಿಕ್ಷಣ ಇಲಾಖೆ ಸಚಿವರನ್ನು ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರನ್ನು ಭೇಟಿ ಮಾಡಿ ಧ್ವಿಭಾಷಾ ನೀತಿಗೆ ಒತ್ತಾಯಿಸಲಾಗಿತ್ತು.

ಇದರ ನಡುವೆ, ಎರಡು ತಿಂಗಳಿಂದ ಅಂತರ್ಜಾಲದಲ್ಲಿ ಆನ್ಲೈನ್ ಪಿಟಿಶನ್ ಮೂಲಕ ಜನರ ಸಹಿ ಪಡೆದು ಮುಖ್ಯಮಂತ್ರಿಗಳಿಗೆ ಕನ್ನಡಿಗರ ಹಕ್ಕೊತ್ತಾಯ ತಲುಪಿಸುವ ಕೆಲಸಕ್ಕೆ ಮುಂದಾಗಿದ್ದೆವು. ಈ ಪಿಟಿಷನ್ ಗೆ ಸುಮಾರು ಐವತ್ತು ಸಾವಿರಕ್ಕೂ ಹೆಚ್ವಿನ ಜನರು ಸಹಿ ಮಾಡಿದ್ದು ದ್ವಿಭಾಷಾ ನೀತಿಯ ಹಕ್ಕೊತ್ತಾಯದ ಅಭಿಯಾನಕ್ಕೆ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿದೆ. ಸದ್ಯದಲ್ಲೇ ಮುಖ್ಯಮಂತ್ರಿಯವರನ್ನು ಬೇಟಿ ಮಾಡಿ ಈ ಪಿಟಿಶನ್ ತಲುಪಿಸುವ ಮೂಲಕ ದ್ವಿಭಾಷಾ ನೀತಿಗಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದೆ.vtu

Key words: Bilingual policy, Online petition, Namma Nadu, Namma alvike