ನವದೆಹಲಿ, 23, ಆಗಸ್ಟ್ ,2025 (www.justkannada.in): ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧದಿಂದ ಸಂಕಷ್ಟ ಎದುರಿಸುತ್ತಿರುವ ಕರ್ನಾಟಕದ ಲಕ್ಷಾಂತರ ಅಸಂಘಟಿತ (ಗಿಗ್) ಕಾರ್ಮಿಕರ ಧ್ವನಿಯನ್ನು ಪ್ರತಿನಿಧಿಸುವ ಕರ್ನಾಟಕ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘಕ್ಕೆ ದೊಡ್ಡ ಬೆಂಬಲ ಸಿಕ್ಕಿದಂತಾಗಿದೆ.
ಹೌದು, ಲೋಕಸಭೆ ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಕರ್ನಾಟಕ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘದ ಸದಸ್ಯರು, ಬೈಕ್ ಟ್ಯಾಕ್ಸಿ ನಿಷೇಧದಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಚಾಲಕರು ಎದುರಿಸುತ್ತಿರುವ ಜೀವನೋಪಾಯ ಸಂಕಷ್ಟವನ್ನು ವಿವರಿಸಿದರು. ಹಾಗೆಯೇ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ನಿಟ್ಟಿನಲ್ಲಿ ಸ್ಪಷ್ಟ ನೀತಿ ರೂಪಿಸಲು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಮನವಿ ಸಲ್ಲಿಸಿದರು.
ಸಂಘದ ಪ್ರತಿನಿಧಿಗಳ ಮಾತುಗಳನ್ನು ಶ್ರದ್ಧೆಯಿಂದ ಕೇಳಿರುವ ರಾಹುಲ್ ಗಾಂಧಿ ಅವರು, ಜೀವನ ನಡೆಸಲು ಹೋರಾಡುತ್ತಿರುವ ಯುವ ಕಾರ್ಮಿಕರ ಪರ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ಅವರ ಈ ಭರವಸೆಯಿಂದ, ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತದಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರಾಜ್ಯದ 6 ಲಕ್ಷಕ್ಕೂ ಹೆಚ್ಚು ಚಾಲಕರು ಮತ್ತು ಅವರ ಕುಟುಂಬಗಳಿಗೆ ಹೊಸ ಭರವಸೆ ಮೂಡಿದಂತಾಗಿದೆ.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಕರ್ನಾಟಕ ಬೈಕ್ ಟ್ಯಾಕ್ಸಿ ಕಲ್ಯಾಣ ಸಂಘವು, ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸಂಬಂಧ ಸಮರ್ಪಕ ನೀತಿಯನ್ನು ರೂಪಿಸುವಂತೆ ಮನವಿ ಮಾಡಿಕೊಂಡಿದೆ. ನೀತಿ ರೂಪಿಸುವವರೆಗೆ, ಕಾರ್ಮಿಕರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳದೆ ತಕ್ಷಣ ಸೇವೆ ಪುನರಾರಂಭಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದೆ.
Key words: Bike taxi, ban, drivers, Rahul Gandhi, assures