ಬಿಎಂಟಿಸಿ ವತಿಯಿಂದ 840 ಡೀಸೆಲ್ ಬಸ್ಸುಗಳನ್ನು ಖರೀದಿಸಲು ಬಿಡ್ ಆಹ್ವಾನ.

ಬೆಂಗಳೂರು, ನವೆಂಬರ್ ,2,2022(www.justkannada.in): ಇಳಿಕೆಯಾಗುತ್ತಿರುವ ಬಸ್ಸುಗಳ ಸಂಖ್ಯೆಯಿಂದಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ೮೪೦ ಬಿಎಸ್- ಗಿI ಮಾದರಿ ಬಸ್ಸುಗಳನ್ನು ಖರೀದಿಸಲು ನಿರ್ಧರಿಸಿದ್ದು, ಇದಕ್ಕಾಗಿ ಬಿಡ್‌ ಗಳನ್ನು ಆಹ್ವಾನಿಸಿದೆ.

ಬಿಎಂಟಿಸಿ ಪ್ರಸ್ತುತ ಒಟ್ಟು ೬,೬೦೦ ಬಸ್ಸುಗಳನ್ನು ಹೊಂದಿದ್ದು, ಈ ಪೈಕಿ ಪ್ರತಿ ನಿತ್ಯ ಕೇವಲ ೫,೬೮೦ ಬಸ್ಸುಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹಳೆಯದಾಗಿರುವ ಬಸ್ಸುಗಳ ನಿರ್ವಹಣೆಯೊಂದಿಗೆ ಹೆಣಗುತ್ತಿರುವ ಬಿಎಂಟಿಸಿ, ಹಳೆಯ ಬಸ್ಸುಗಳಿಗೆ ಬಹುತೇಕ ಪ್ರತಿನಿತ್ಯ ದುರಸ್ತಿ ಪಡಿಸಬೇಕಾದ ಅಗತ್ಯವನ್ನು ಎದುರಿಸುತ್ತಿದೆ ಹಾಗೂ ಬಸ್ಸುಗಳ ಕೊರತೆಯನ್ನು ನೀಗಿಸಲು ಈ ಬಸ್ಸುಗಳನ್ನೇ ಬಳಸಿಕೊಳ್ಳುತ್ತಿದೆ. ಅಳವಡಿಸಿಕೊಂಡಿರುವ ನಿಯಮಗಳ ಪ್ರಕಾರ ಬಿಎಂಟಿಸಿ ಈ ವರ್ಷದ ಅಂತ್ಯಕ್ಕೆ ೯೮೯ ಬಸ್ಸುಗಳನ್ನು ಸ್ಕ್ರ್ಯಾಪ್ ಮಾಡಬೇಕಿದೆ.

ಈ ಸಂಬಂಧ ಮಾತನಾಡಿದ ಬಿಎಂಟಿಸಿ ಅಧಿಕಾರಿಯೊಬ್ಬರು, “ವಾಹನಗಳು ೫ ಲಕ್ಷ ಕಿ.ಮೀ.ಗಳ ನಂತರ ಸಮಸ್ಯೆಗಳನ್ನು ಎದುರಿಸಲು ಆರಂಭಿಸುತ್ತವೆ. ಒಂದು ಬಸ್ಸನ್ನು ೮.೫ ಲಕ್ಷ ಕಿ.ಮೀ.ಗಳ ನಂತರ ಸ್ಕ್ರ್ಯಾಪ್ ಗೊಳಿಸಬೇಕು. ಇದರಿಂದ ಕಾರ್ಯನಿರ್ವಹಣೆ ಉತ್ತಮವಾಗಿರುತ್ತದೆ ಹಾಗೂ ವಿಶ್ವಸನೀಯ ಸಾರಿಗೆ ಸೇವೆಗಳನ್ನು ಒದಗಿಸಲು ನೆರವಾಗುತ್ತದೆ,” ಎಂದು ವಿವರಿಸಿದರು.

ಈ ನಿಯಮವನ್ನು ಅಳವಡಿಸಿದರೆ ೯೮೯ ಬಸ್ಸುಗಳನ್ನು ಸ್ಕ್ರ್ಯಾಪ್ ಮಾಡಬೇಕಾಗುತ್ತದೆ. ಬಿಎಂಟಿಸಿ ಹೊಸ ಬಸ್ಸುಗಳ ಖರೀದಿಯಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ, ಕೊರತೆ ಎದುರಾಗಿರುವ ಸಂಖ್ಯೆಯ ಬಸ್ಸುಗಳನ್ನು ಭರಿಸಲು ಇರುವ ಹಳೆಯ ಬಸ್ಸುಗಳನ್ನೇ ಹೇಗೋ ದುರಸ್ತಿಗೊಳಿಸಿ ಸಾಧ್ಯವಿರುವಷ್ಟು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ

ವಿದ್ಯುತ್ ಚಾಲಿತ ವಾಹನಗಳು ಸಾಕಷ್ಟಿಲ್ಲ

ಬಿಎಂಟಿಸಿಯ ಬಸ್ಸುಗಳ ತಂಡಕ್ಕೆ ಸೇರ್ಪಡೆಗೊಳಿಸಿರುವ ವಿದ್ಯುತ್ ಚಾಲಿತ ಬಸ್ಸುಗಳ ಸಂಖ್ಯೆ, ಈಗಿರುವ ಬೇಡಿಕೆಯ ಹೋಲಿಕೆಯಲ್ಲಿ ಬಹಳ ಕಡಿಮೆ. ಬಿಎಂಟಿಸಿ ಒಟ್ಟು ೧೨೦, ೩೦೦ ದೊಡ್ಡ (೧೨-ಮೀಟರ್ ಉದ್ದ) ವಿದ್ಯುತ್ ಬಸ್ಸುಗಳನ್ನು ರಸ್ತೆಗಿಳಿಸಿದೆ. ಉಳಿದ ಬಸ್ಸುಗಳನ್ನು ರಸ್ತೆಗಳಿಸಲು ಇನ್ನೂ ಮೂರು ತಿಂಗಳು ಬೇಕಾಗುತ್ತದೆ. ೯೦ ಸಾಧರಣ-ಗಾತ್ರದ ವಿದ್ಯುತ್ ಚಾಲಿತ ಬಸ್ಸುಗಳು ಸೀಮಿತ ಸಾಮರ್ಥ್ಯವನ್ನು ಹೊಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಗಸ್ಟ್ ನಲ್ಲಿ ಬಿಎಂಟಿಸಿ ಟಾಟಾ ಸಂಸ್ಥೆಯಿಂದ ೯೨೧ ವಿದ್ಯುತ್ ಚಾಲಿತ ಬಸ್ಸುಗಳನ್ನು ಗುತ್ತಿಗೆ ಆಧಾರದ ಮೇಲೆ ಹೊಂದಲು ಕಾರ್ಯಾದೇಶ ಹೊರಡಿಸಿತ್ತು. ಆದಾಗ್ಯೂ, ಇನ್ನೂ ಬಿಎಂಟಿಸಿ ಡೀಸೆಲ್ ಬಸ್ಸುಗಳಿಂದ ಮುಕ್ತಿ ಪಡೆಯುವುದಕ್ಕೆ ಸಾಧ್ಯವಾಗಿಲ್ಲ.

ಈ ಹಿಂದೆ ಬಿಎಂಟಿಸಿ ಅಧಿಕಾರಿಗಳು, ಬಿಎಸ್- ಗಿI ಬಸ್ಸುಗಳು, ಹೊಗೆ ಹೊರಸೂಸುವಿಕೆಗೆ ಸಂಬಂಧಪಟ್ಟಂತೆ ಸಿಎನ್‌ ಜಿ ಬಸ್ಸುಗಳಂತೆಯೇ ಪರಿಸರ-ಸ್ನೇಹಿಯಾಗಿವೆ ಎಂದು ವಾದಿಸಿದ್ದರು ಹಾಗೂ ಸಿಎನ್‌ ಜಿ ಬಸ್ಸುಗಳಿಗಿಂತ ವಿದ್ಯುತ್ ಚಾಲಿತ ಬಸ್ಸುಗಳೇ ಮೇಲು ಎಂದಿದ್ದರು.

“ವಿದ್ಯುತ್ ಚಾಲಿತ ವಾಹನಗಳಿಗೆ ಪರಿವರ್ತನೆಯಾಗುತ್ತಿರುವ ಈ ಸಮಯದಲ್ಲಿ ಡೀಸೆಲ್ ಬಸ್ಸುಗಳಿರುವುದು ಅಗತ್ಯ. ಸಚಿವಾಲಯ ಮತ್ತು ಬಿಎಂಟಿಸಿ ಮಂಡಳಿಯು ೮೪೦ ಬಿಎಸ್- ಗಿI ಬಸ್ಸುಗಳನ್ನು ಖರೀದಿಸಲು ಅನುಮೋದಿಸಿದ್ದ, ಹಳೆಯ ಬಸ್ಸುಗಳನ್ನು ಸ್ಕ್ರ್ಯಾಪ್ ಮಾಡಿ ಹೊಸ ವಾಹನಗಳನ್ನು ಸಾಧ್ಯವಾದಷ್ಟೂ ಬೇಗ ಸೇರ್ಪಡೆಗೊಳಿಸಬಹುದೆಂದು ಆಶಿಸಿದ್ದೇವೆ,” ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಟೆಂಡರ್ ಷರತ್ತುಗಳ ಪ್ರಕಾರ ತಾಂತ್ರಿಕವಾಗಿ ಅರ್ಹತೆ ಹೊಂದಿರುವ ಕಂಪನಿಗಳಿಗೆ ಹಣಕಾಸಿನ ಬಿಡ್‌ ಗಳು ಡಿಸೆಂಬರ್ ೬ ರಿಂದ ತೆರೆಯಲಾಗುತ್ತದೆ. ಕಾರ್ಯಾದೇಶವನ್ನು ಪಡೆಯುವ ಕಂಪನಿಯು ಐದು ತಿಂಗಳ ಒಳಗಾಗಿ ೮೪೦ ಬಸ್ಸುಗಳನ್ನು ಸರಬರಾಜು ಮಾಡಬೇಕಾಗುತ್ತದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Bid-invitation – purchase – 840 diesel -buses – BMTC