ಬೂಕರ್ ಪ್ರಶಸ್ತಿಗೆ ಲೇಖಕಿ ಭಾನು ಮುಷ್ಟಾಕ್ ಭಾಜನ: ಸಚಿವ ಶಿವರಾಜ ತಂಗಡಗಿ ಅಭಿನಂದನೆ

ಬೆಂಗಳೂರು,ಮೇ,21,2025 (www.justkannada.in): ಬೂಕರ್ ಪ್ರಶಸ್ತಿಗೆ ಭಾಜನರಾದ ಲೇಖಕಿ ಭಾನು ಮುಷ್ಟಾಕ್ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡ ಸಾಹಿತ್ಯದ ಸಂವೇದನಾಶೀಲ ಲೇಖಕಿ ಬಾನು  ಮುಷ್ತಾಕ್ ಅವರಿಗೆ ಅಂತರರಾಷ್ಟ್ರೀಯ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಎಂದು ಪರಿಗಣಿಸಲ್ಪಟ್ಟಿರುವ ಬೂಕರ್ ಪ್ರಶಸ್ತಿ ದೊರೆತಿರುವುದು ಸಮಸ್ತ ಕನ್ನಡಿಗರಿಗೆ ಹೆಮ್ಮೆ ತಂದಿದೆ. ಸರ್ಕಾರದ ಪರವಾಗಿ ಹಾಗೂ ಇಡೀ ನಾಡಿನ ಜನರ ಪರವಾಗಿ  ಭಾನು ಮುಷ್ತಾಕ್ ಅವರಿಗೆ ಹಾರ್ದಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಅವರ ಎದೆಯ ಹಣತೆ ಎಂಬ ಕಥಾ ಸಂಕಲನ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ, ಕನ್ನಡದ ಈ ಕಥೆಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದು ಪ್ರಶಸ್ತಿಗೆ ಕಾರಣರಾದ ಅನುವಾದಕಿ ದೀಪ ಬಸ್ತಿ ಅವರು ಸಹ ಅಭಿನಂದನೆಗೆ ಅರ್ಹರು. ಅವರಿಗೂ ಸಮಸ್ತ ಕನ್ನಡಿಗರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಜನಾಂಗದ ಪ್ರತಿನಿಧಿಯಾಗಿ  ಮಹಿಳೆಯರ ಬವಣೆಗಳನ್ನು ತಮ್ಮ ಸಾಹಿತ್ಯದ ಮೂಲಕ ಜಗತ್ತಿನ ಮುಂದೆ ತೆರೆದಿಟ್ಟ ಬಾನು ಮುಷ್ತಾಕ್ ಅವರು ಈ ಪ್ರಶಸ್ತಿಗೆ ಭಾಜನರಾದ ಮೊಟ್ಟ ಮೊದಲ ಕನ್ನಡದ ಲೇಖಕಿಯಾಗಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿಸಿದ ಅವರ ಈ ಸಂಭ್ರಮದಲ್ಲಿ ನಾವೆಲ್ಲರೂ ಭಾಗಿ ಯಾಗೋಣ ಎಂದು ಸಚಿವ ಶಿವರಾಜ ತಂಗಡಗಿ ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದ್ದಾರೆ.

Key words: Minister, Shivaraj Thangadgi, congratulates, Bhanu Mushtaq, Booker Award