ಬರ್ಲಿನ್ ಸಾಂಸ್ಕೃತಿಕ ಹಬ್ಬ: ಹಂಪಿ ರಥಕ್ಕೆ ‘ಅತ್ಯುತ್ತಮ ವ್ಯಾಗನ್’ ಬಹುಮಾನ

ಬರ್ಲಿನ್,ಆಗಸ್ಟ್,4,2025 (www.justkannada.in): ಜರ್ಮನಿ ರಾಜಧಾನಿ ಬರ್ಲಿನ್  ನಗರದಲ್ಲಿ ಇತ್ತೀಚೆಗೆ ನಡೆದ ‘ಕಾರ್ನಿವಲ್ ದೆರ್ ಕುಲ್ಟೂರೆನ್ -2025’ ಸಾಂಸ್ಕೃತಿಕ ಹಬ್ಬದ ಅಂಗವಾಗಿ “ಬರ್ಲಿನ್ ಕನ್ನಡ ಬಳಗ ಈ.ವಿ.” (ಬಿಕೆಬಿಇವಿ) ವತಿಯಿಂದ ನಿರ್ಮಿಸಲಾಗಿದ್ದ ಐತಿಹಾಸಿಕ ಹಂಪಿ ರಥದ ಪ್ರತಿಕೃತಿಯು ವೀಕ್ಷಕರ  ಮನಸೂರೆಗೊಂಡು “ಅತ್ಯುತ್ತಮ ವ್ಯಾಗನ್” ಬಹುಮಾನಕ್ಕೆ ಪಾತ್ರವಾಯಿತು.

ಪ್ರಪಂಚದ ಬೇರೆ ಬೇರೆ ದೇಶಗಳ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ 68 ತಂಡಗಳು ಪಾಲ್ಗೊಂಡಿದ್ದ ಈ ವಿಜೃಂಭಣೆಯ ಆಚರಣೆಯಲ್ಲಿ ಕನ್ನಡ ನಾಡಿನ ಕಲೆ, ನೃತ್ಯ, ವೈಭವ, ಪರಂಪರೆ, ಹಿರಿಮೆಗಳನ್ನು ಒಳಗೊಂಡ ಪ್ರದರ್ಶನಗಳು ಕೂಡ ಗಮನ ಸೆಳೆದವು.

ದೋಸಾಕಿಂಗ್ ರೆಸ್ಟೋರೆಂಟ್ ಬರ್ಲಿನ್, ಎಐಸಿಎಸ್ (AICS) ಲಾಜಿಸ್ಟಿಕ್ಸ್ ಮತ್ತು ಐಐಎಫ್ಸಿ (IIFC) ಪ್ರಾಯೋಜಕತ್ವ ಹಾಗೂ ಬರ್ಲಿನ್ ನಲ್ಲಿ ನೆಲೆಸಿರುವ  ಕನ್ನಡ ಸಮುದಾಯದವರು ಇದಕ್ಕೆ ಉದಾರ  ಆರ್ಥಿಕ ಸಹಕಾರ ನೀಡಿದ್ದರು. ಬರ್ಲಿನ್ ನಲ್ಲಿನ ಶ್ರೀ ಗಣೇಶ ದೇವಸ್ಥಾನ ನಿರ್ವಾಹಕರು ಹಂಪಿ ರಥ ನಿರ್ಮಾಣಕ್ಕಾಗಿ  ಸ್ಥಳ ನೆರವು ನೀಡಿದ್ದರು.

ಸಂಘದ ಸ್ವಯಂಸೇವಕರ ಸುಮಾರು 4 ತಿಂಗಳು ಶ್ರಮಿಸಿ ಹಂಪಿ ರಥ ನಿರ್ಮಿಸಿದ್ದರು. ತೀವ್ರ ಪೂರ್ವತಯಾರಿ ನಡೆಸಿದ್ದ ಸಾಂಸ್ಕೃತಿಕ ತಂಡದವರು ವರನಟ ಡಾ. ರಾಜಕುಮಾರ್ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಹಾಡಿನೊಂದಿಗೆ ಪ್ರಾರಂಭಿಸಿ, ಯಕ್ಷಗಾನ, ಭರತನಾಟ್ಯ, ಕೋಲಾಟ, ತಮಟೆ, ಕಂಸಾಳೆ, ಹುಲಿವೇಷಗಳನ್ನೊಳಗೊಂಡ ಸಣ್ಣ ಪ್ರದರ್ಶನ ನೀಡಿದರು.  ಮೆರವಣಿಗೆ ವೇಳೆ ಭಾರತ ಹಾಗೂ ಕರ್ನಾಟಕದ ಹಿರಿಮೆ ಸಾರುವ ಘೋಷಣೆಗಳು ಮೊಳಗಿದವು.vtu

Key words: Berlin Cultural Festival,  Hampi Chariot, Wins, ‘Best Wagon’ Award