ಕಾವೇರಿ ನೀರಿಗಾಗಿ ಆಗ್ರಹಿಸಿ ಬೆಂಗಳೂರು ಬಂದ್:  ವಿವಿಧ ಸಂಘಟನೆಗಳಿಂದ ಪ್ರತಿಭಟನೆ, ಆಕ್ರೋಶ.

ಬೆಂಗಳೂರು,ಸೆಪ್ಟಂಬರ್,26,2023(www.justkannada.in):  ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಇಂದು ರಾಜ್ಯ ರಾಜಧಾನಿ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಂಡಿದ್ದು,  ಬೆಳ್ಳಂಬೆಳಿಗ್ಗೆ ರೈತರು, ಕನ್ನಡ ಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಬಂದ್ ಹಿನ್ನೆಲೆ ವಾಹನಗಳ ಸಂಚಾರ  ವ್ಯತ್ಯಯವಾಗಿದ್ದು, ಜಿಲ್ಲಾ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.  ಹಾಗೇ ಶಿಕ್ಷಕರು, ಉಪನ್ಯಾಸಕರಿಗೂ ರಜೆ ಘೋಷಿಸಲಾಗಿದೆ.  ಸಾರಿಗೆ ಸಂಚಾರ, ಮಾರುಕಟ್ಟೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ‘ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು’ ಸಂಘಟನೆ ನೇತೃತ್ವದಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಬಂದ್‌ ಇರಲಿದೆ. ಇದಕ್ಕೆ ಕನ್ನಡಪರ, ರೈತಪರ ಸಂಘಟನೆಗಳು, ಸಾರಿಗೆ, ಶಿಕ್ಷಕರ ಸಂಘಟನೆಗಳು, 150ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ಪೂರ್ಣ ಬೆಂಬಲ ನೀಡಿವೆ. ಎಫ್‌ಕೆಸಿಸಿಐ, ಬೀದಿ ಬದಿ ವ್ಯಾಪಾರಸ್ಥರು ಸೇರಿ 50ಕ್ಕೂ ಹೆಚ್ಚು ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ.

ಇನ್ನು ಮಧ್ಯರಾತ್ರಿಯಿಂದಲೇ ನಗರದಲ್ಲಿ 144 ಸೆಕ್ಷನ್​ ಜಾರಿ ಮಾಡಲಾಗಿದೆ. ಪೊಲೀಸ್​ ಬಿಗಿ ಬಂದೋಬಸ್ಥ್​ ಮಾಡಲಾಗಿದೆ. ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸುಮಾರು 20 ಕ್ಕೂ ಹೆಚ್ಚು ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಕುರುಬೂರು ಶಾಂತಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

Key words: Bengaluru bandh -demanding -Cauvery water- Protest – organisations.