ಬಳ್ಳಾರಿ ಗಲಾಟೆ ವಿಚಾರದಲ್ಲಿ SP ಸಸ್ಪೆಂಡ್ : ಸರ್ಕಾರದ ವಿರುದ್ದ ಬಿವೈ ವಿಜಯೇಂದ್ರ ಕಿಡಿ

ಬೆಂಗಳೂರು,ಜನವರಿ,3,2026 (www.justkannada.in): ಬಳ್ಳಾರಿಯಲ್ಲಿ ನಡೆದ ಗಲಾಟೆ ಪೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನಜ್ಜೂರ ಅವರನ್ನು ಅಮಾನತು ಮಾಡಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಬಿವೈ ವಿಜಯೇಂದ್ರ, ಬಳ್ಳಾರಿಯಲ್ಲಿ ಕಾಂಗ್ರೆಸ್ ನಡೆಸಿದ ನಿರ್ಲಜ್ಜ ಗೂಂಡಾಗಿರಿ, ನಮ್ಮ ಪಕ್ಷದ ಶಾಸಕರ ಹಾಗೂ ಕಾರ್ಯಕರ್ತರ ಮೇಲಿನ ಹತ್ಯೆ ಪ್ರಯತ್ನ, ಹಲ್ಲೆ, ಕಾನೂನು ಸುವ್ಯವಸ್ಥೆಯ ಸಂಪೂರ್ಣ ಕುಸಿತ, ಓರ್ವನ ಪ್ರಾಣಹಾನಿಯ ಗಂಭೀರ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು, ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ಕೇವಲ 1 ದಿನದ ಹಿಂದಷ್ಟೇ ಅಧಿಕಾರ ಸ್ವೀಕರಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಿರುವುದು, ತನ್ನ ಅಪ್ರಬುದ್ಧತೆ, ವೈಫಲ್ಯ ಮುಚ್ಚಿಕೊಳ್ಳಲು ನಡೆಸುತ್ತಿರುವ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ನಿಮ್ಮದೇ ಶಾಸಕರ ಪ್ರಚೋದನಾಕಾರಿ ನಡವಳಿಕೆ ಹಾಗೂ ಆಡಳಿತ ಪಕ್ಷದ ಕಾರ್ಯಕರ್ತರ ಪುಂಡಾಟಿಕೆಯನ್ನು ನಿಯಂತ್ರಿಸುವ ಬದಲು, ಓರ್ವ ಅಧಿಕಾರಿಯನ್ನು ‘ಬಲಿಪಶು’ ಮಾಡುವುದು ಎಷ್ಟು ಸರಿ? ಅಧಿಕಾರಿಗೆ ಕನಿಷ್ಠ ಪರಿಸ್ಥಿತಿಯನ್ನು ಅವಲೋಕಿಸಲು ಕಾಲಾವಕಾಶವನ್ನೇ ನೀಡದೆ ಅಮಾನತು ಮಾಡಿರುವುದು ನಿಮ್ಮ ಆಡಳಿತದ ದಿವಾಳಿತನವನ್ನು ತೋರಿಸುತ್ತಿದೆ. ಸಾರ್ವಜನಿಕವಾಗಿ ಗುಂಡು ಹಾರಿಸಿ ಭಯೋತ್ಪಾದನೆ ನಡೆಸಿದ ಶಾಸಕರ ಬೆಂಬಲಿಗರ ಮೇಲೆ ಕ್ರಮ ಕೈಗೊಳ್ಳುವ ಧೈರ್ಯ ನಿಮಗಿದೆಯೇ? ಕೇವಲ ಅಧಿಕಾರಿಗಳ ತಲೆದಂಡದಿಂದ ಸತ್ಯವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ.

ಬಳ್ಳಾರಿಯಲ್ಲಿ ಗುಂಡು ಹಾರಿಸಿದ್ದು ಯಾರು ಮತ್ತು ಯಾರ ಪ್ರಚೋದನೆಯಿಂದ ಈ ಘಟನೆ ನಡೆದಿದೆ ಎಂಬ ಸತ್ಯ ಹೊರಬರಲು, ನಿಮ್ಮ ಮುಲಾಜಿನಲ್ಲಿ ಇರುವ ತನಿಖೆಯಿಂದ ಸಾಧ್ಯವಿಲ್ಲ. ಸ್ವಲ್ಪವಾದರೂ ನೈತಿಕತೆ ಇದ್ದರೆ, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ಪ್ರಕರಣದ ನಿಷ್ಪಕ್ಷಪಾತ ತನಿಖೆ ಮಾಡಿಸಿ, ರಾಜ್ಯವೇ ತಲೆತಗ್ಗಿಸುವಂತಹ ಇಂತಹ ಗೂಂಡಾ ವರ್ತನೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ಹಾಗೆಯೇ ನಿಮ್ಮ ವೈಫಲ್ಯ ಮರೆಮಾಚಲು ಪ್ರಾಮಾಣಿಕ ಅಧಿಕಾರಿಗಳನ್ನು ಬಲಿಪಶು ಮಾಡುವ, ಅವರ ಸ್ಥೈರ್ಯ ಕುಗ್ಗಿಸುವ ಈ ಕೆಟ್ಟ ಕಾಂಗ್ರೆಸ್ ಪ್ರವೃತ್ತಿ ಈ ಕೂಡಲೇ ನಿಲ್ಲಲಿ ಎಂದು ಬಿವೈ ವಿಜಯೇಂದ್ರ ಹರಿಹಾಯ್ದಿದ್ದಾರೆ.

Key words: Bellary, riot case, SP, suspended, BY Vijayendra, government