ಜನರಿಗೆ ಮೋಸ ಮಾಡಿದ ಅನರ್ಹರಿಗೆ ಬುದ್ದಿ ಕಲಿಸುವ ಕಾರ್ಯ ಈಗ ಆಗಬೇಕು- ಮಾಜಿ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ…

ಬೆಳಗಾವಿ,ನ,18,2019(www.justkannada.in): ಜನರಿಗೆ ಮೋಸ ಮಾಡಿದ ಅನರ್ಹರಿಗೆ ಬುದ್ದಿ ಕಲಿಸುವ ಕಾರ್ಯ ಈಗ ಆಗಬೇಕು ಎಂದು ಅನರ್ಹ ಶಾಸಕರ ವಿರುದ್ದ ಮಾಜಿ ಸಚಿವ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು.

ಅಥಣಿಯಲ್ಲಿ ಇಂದು ಮಾತನಾಡಿದ ಮಾಜಿ ಸಚಿವ ಎಂ.ಬಿ. ಪಾಟೀಲ್, ಇದು ಅವಶ್ಯಕತೆ ಇರಲಾರದ ಚುನಾವಣೆ, ಜನರ ಮೇಲೆ‌, ತೆರಗೆದಾರರ ಮೇಲೆ ಅನರ್ಹ ಶಾಸಕರು ಹೇರಿದಂತಹ ಚುನಾವಣೆಯಾಗಿದೆ. ಅವರು ಅನರ್ಹ ಶಾಸಕರು ಅಲ್ಲ, ಬರಿ ಅನರ್ಹರು ಮಾತ್ರ, ಇದು ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ, ಜನಸಾಮಾನ್ಯರ ತೆರಿಗೆ ಹಣ ಇದಕ್ಕೆ ವ್ಯಯ್ಯ ಆಗುತ್ತಿದೆ. ಅನರ್ಹರಾಗಿದ್ದಾಗಲೇ ಚುನಾವಣೆಗೆ ಸ್ಪರ್ಧೆ ಮಾಡಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ, ಅಥಣಿಯಲ್ಲಿ ಕುಮಟಳ್ಳಿ ಅಪರೇಷನ್ ಕಮಲದ ಬಲೆಗೆ ಬಿದ್ದಿದ್ದಾರೆ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಕೂಡ ಅದೇ ಹೆಜ್ಜೆ ಇಟ್ಟಿದ್ದಾರೆ, ಅಥಣಿ, ಕಾಗವಾಡ, ಗೋಕಾಕದಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಶಾಸಕರು ಬೇಕಿತ್ತು ಅಂತಾ ಜನ ಅಂದಿದ್ರು, ನಡು ನೀರಿನಲ್ಲಿ ಬಿಟ್ಟು ರಾಜೀನಾಮೆ ಕೊಟ್ಟು ಹೋಗಿದ್ದಾರೆ ಅಂತಾ ಆಗ ಜನ ಶಾಪ ಹಾಕಿದ್ದಾರೆ ಎಂದು ಹೇಳಿದರು.

ಎಲ್ಲ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ, ರಾಜು ಕಾಗೆ ಸ್ಥಾನವನ್ನು ಶ್ರೀಮಂತ ಪಾಟೀಲ್ ಕಸಿದುಕೊಂಡಿದ್ದಾರೆ, ಕಾಗೆಯವರಿಗೆ ಅನ್ಯಾಯವಾದ ಕಾರಣ ನಮ್ಮ ಪಕ್ಷಕ್ಕೆ ಬಂದಿದ್ದಾರೆ, ಕಾಗೆ ಹಿರಿತನಕ್ಕೆ ಧಕ್ಕೆ ಬಂದಿದೆ, ರಾಜು ಕಾಗೆ ಕಾಂಗ್ರೆಸ್ ಪಕ್ಷದ ಸರ್ವಸಮ್ಮತ ಅಭ್ಯರ್ಥಿಯಾಗಿದ್ದು, ಪಕ್ಷಾತೀತವಾಗಿ ಜನ ಈ ಸಲ ಮತ ಹಾಕಲಿದ್ದಾರೆ, ಯಾಕಂದ್ರೆ ಬಿಜೆಪಿ ಬಗ್ಗೆ ಪ್ರವಾಹದ ಸಂದರ್ಭದಲ್ಲಿ ಅನರ್ಹರು ಮಾಡಿದ ಕಾರ್ಯದಿಂದ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಜನರಿಗೆ ಮೋಸ ಮಾಡಿದ ಅನರ್ಹರಿಗೆ ಬುದ್ದಿ ಕಲಿಸುವ ಕಾರ್ಯ ಈಗ ಆಗಬೇಕಿದೆ ಎಂದು ಎಂಬಿ ಪಾಟೀಲ್ ತಿಳಿಸಿದರು.

Key words: belgavi-former minister -MB Patil- disqualified MLA-cheated