ಬೆಳಗಾವಿ,ಡಿಸೆಂಬರ್,8,2025 (www.justkannada.in): ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ ವಿಧಾನಮಂಡಲ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಆಡಳಿತ ಪಕ್ಷವನ್ನು ಕಟ್ಟಿಹಾಕಲು ವಿಪಕ್ಷಗಳು ಸಜ್ಜಾಗಿದ್ದರೆ ಇತ್ತ ಸರ್ಕಾರದ ವಿರುದ್ದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.
ವಿಧಾನ ಮಂಡಲ ಅಧಿವೇಶನದಲ್ಲಿ ಬೆಂಬಲ ಬೆಲೆ, ರೈತರು ಬೆಳೆದ ಕಬ್ಬು, ಮಕ್ಕೆಜೋಳ ಇತರ ಬೆಳೆಗೆ ಸೂಕ್ತ ಬೆಲೆ, ನೆರೆ-ಪ್ರವಾಹ ಪರಿಹಾರ, ಸರ್ಕಾರ ನೇಮಕಾತಿ, ಪೊಲೀಸ್ ವೈಫಲ್ಯ, ನೀರಾವರಿ ವಿಷಯಗಳು ಸೇರಿದಂತೆ ಉತ್ತರ ಕರ್ನಾಟಕದ ಹತ್ತು ಹಲವು ಸಮಸ್ಯೆಗಳು, ಬೇಡಿಕೆಗಳ ಪ್ರಸ್ತಾಪಿಸಿ ಸರ್ಕಾರದ ಮೇಲೆ ಮುಗಿ ಬೀಳಲು ವಿಪಕ್ಷಗಳು ಅಣಿಯಾಗಿವೆ. ಇದಕ್ಕೆ ರಾಜ್ಯ ಸರ್ಕಾರ ಎರಡೂ ವರೆ ವರ್ಷಗಳ ಸಾಧನೆ ಸಮೇತ ಪ್ರತ್ಯುತ್ತರಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಲು ತಯಾರಾಗಿದ್ದಾರೆ.
ಸರ್ಕಾರದ ವಿರುದ್ದ 84 ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಮುಂದಾಗಿವೆ. ಧರಣಿ, ಪ್ರತಿಭಟನೆಗಳಿಗೆ ಬೆಳಗಾವಿಯ ಸುವರ್ಣ ಗಾರ್ಡನ್ ಬಳಿ ತಾತ್ಕಾಲಿಕ ಟೆಂಟ್ ನಿರ್ಮಾಣ ಮಾಡಲಾಗಿದೆ. ಒಂದೇ ಕಡೆ ಪ್ರತಿಭಟನೆ ನಡೆಸಲು 6 ಟೆಂಟ್ ಗಳನ್ನು ಹಾಕಲಾಗಿದೆ. ಪ್ರತಿಭಟನಾಕಾರರ ಸಂಖ್ಯೆ ಆಧರಿಸಿ ಟೆಂಟ್ ನೀಡಲು ತೀರ್ಮಾನಿಸಲಾಗಿದೆ.
ಬೃಹತ್ ಪ್ರತಿಭಟನೆಗಳಿಗಾಗಿ ಓಲ್ಡ್ ಪಿಬಿ ರಸ್ತೆಯ ಬಳಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ರೈತರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು, ಉಪನ್ಯಾಸಕರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ, ಬೆಳಗಾವಿ ಜಿಲ್ಲೆ ವಿಭಜನೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಲು ಸಂಘಟನೆಗಳು ಮುಂದಾಗಿವೆ.
Key words: Belgaum, session, Various, organizations, government







