ಯತ್ನಾಳ್‌ಗೆ ಬುದ್ದಿಹೇಳುವ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನಕ್ಕೆ ತಿರುಗುಬಾಣ…!

ಬೆಂಗಳೂರು, ಜನವರಿ 04, 2020: ಬಸನಗೌಡ ಪಾಟೀಲ್ ಯತ್ನಾಳ್ ಇಂದು ಕೌಟುಂಬಿಕ ಆಳ್ವಿಕೆಯ ಸೂಚನೆಯನ್ನು ನೀಡುತ್ತಾ, ವಿಜೇಂದ್ರ ಅವರ ನಿಕಟ ಸಂಪರ್ಕದಲ್ಲಿರುವಂತಹ ಕಮೀಷನ್ ಏಜೆಂಟರು ಯಾವ ರೀತಿ ಸಮಾನಾಂತರ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ವಿವರಿಸುವ ಮೂಲಕ, ತಮಗೆ ಬುದ್ದಿ ಹೇಳಲು ಬಯಸಿದ್ದಂತಹ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಅವರ ಪ್ರಯತ್ನಕ್ಕೆ ತಿರುಗುಬಾಣ ನೀಡಿದರು.

ತಮ್ಮ ಮಗನನ್ನು ರಾಜ್ಯ ರಾಜಕೀಯದ ಮುಂಚೂಣಿಗೆ ತರುವ ಮುಖ್ಯಮಂತ್ರಿ ಬಿ.ಎಸ್. ಯಡ್ಯೂರಪ್ಪ ಅವರ ಪ್ರಯತ್ನದ ವಿರುದ್ಧ ಯತ್ನಾಳ್ ಎಚ್ಚರಿಕೆ ನೀಡಿದರು. ಬಿಜೆಪಿ, ವಾಜಪೇಯಿ ಹಾಗೂ ನರೇಂದ್ರ ಮೋದಿಯವರ ತತ್ವಗಳನ್ನು ಯಡ್ಯೂರಪ್ಪನವರು ದುರ್ಬಲಗೊಳಿಸುತ್ತಿದ್ದಾರೆ ಎಂದು ಗುಡುಗಿದರು.

ತಮ್ಮ ಮಗ ವಿಜೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಲು ಬಂದ ಯತ್ನಾಳ್ ಅವರ ವಿರುದ್ಧ ಆಕ್ಷೇಪ ಎತ್ತಲು ಪ್ರಯತ್ನಿಸಿದ ಯಡ್ಯೂರಪ್ಪ ಅವರಿಗೆ ತಿರುಗೇಟು ನೀಡುತ್ತಾ ಯತ್ನಾಳ್ ತಮ್ಮ ಆರೋಪವನ್ನು ಸಮರ್ಥಿಸಿಕೊಂಡರು. ಇದರಿಂದ ಸಿಡಿಮಿಡಿಗೊಂಡ ಮುಖ್ಯಮಂತ್ರಿಗಳು, ಯತ್ನಾಳ್ ಅವರನ್ನು ಸಭೆಯಿಂದ ಹೊರಗೆ ಹೋಗುವಂತೆ ಸೂಚಿಸಿದರು.

ಈ ಹಂತದಲ್ಲಿ, ಬಿಜೆಪಿ ಆಹ್ವಾನದ ಮೇರೆಗೆ ಓರ್ವ ಎಂಎಲ್‌ಎ ಆಗಿ ಸಭೆಗೆ ಹಾಜರಾಗಿದ್ದೇನೆ, ಯಡ್ಯೂರಪ್ಪ ಅವರ ಮನೆಗೆ ಬಂದಿಲ್ಲ ಎಂದು ಖಡಕ್ಕಾಗಿ ಉತ್ತರಿಸಿದರು. ಇದಕ್ಕೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಮೂಖ ಪ್ರೇಕ್ಷರಾಗಿದ್ದರು.
ಯತ್ನಾಳ್, ವಿಜೇಂದ್ರ ಹೆಸರನ್ನು ಪ್ರಸ್ತಾಪಿಸಿದಾಗ ರೇಣುಕಾಚಾರ್ಯ ಮುಖ್ಯಮಂತ್ರಿಗಳ ಪರವಾಗಿ ಮಾತನಾಡಲು ಎದ್ದು ನಿಂತರು. ಆದರೆ ಇದಕ್ಕೆ ಇತರೆ ಎಂಎಲ್‌ಎಗಳು ವಿರೋಧಿಸಿ, ಯತ್ನಾಳ್ ಅನ್ನು ಬೆಂಬಲಿಸಿ, ರೇಣುಕಾಚಾರ್ಯರನ್ನು ಕುಳಿತುಕೊಳ್ಳುವಂತೆ ಸೂಚಿಸಿದರು.

ಮುಖ್ಯಮಂತ್ರಿಗಳ ಆಡಳಿತದ ಬಗ್ಗೆ ಬಹುಪಾಲು ಎಂಎಲ್‌ಎಗಳು ತಮ್ಮ ಅಸಂತುಷ್ಟತತೆಯನ್ನು ವ್ಯಕ್ತಪಡಿಸುತ್ತಾ, ಆಡಳಿತದಲ್ಲಿ ಅವರ ಮಗ ವಿಜೇಂದ್ರನ ಮಧ್ಯಸ್ಥಿಕೆಯನ್ನು ಬಲವಾಗಿ ಖಂಡಿಸಿದರು.

ಒಂದು ಹಂತದಲ್ಲಿ ಯತ್ನಾಳ್, “ನಾನು ಬೆನ್ನಿಗೆ ಚೂರಿ ಹಾಕುವವರ ಪೈಕಿ ಅಲ್ಲ. ನಾನೂ ಕೂಡ ನಿಮ್ಮಂತೆಯೇ ಪಕ್ಷಕ್ಕಾಗಿ ದುಡಿದಿದ್ದೇನೆ, ಪಕ್ಷ ನಿರ್ಮಾಣದಲ್ಲಿ ನನ್ನದೂ ಕೊಡುಗೆಯಿದೆ, ನಿಮ್ಮನ್ನು ಪಕ್ಷಕ್ಕೆ ಪುನಃ ತೆಗೆದುಕೊಳ್ಳುವಂತೆ ಅರುಣ್ ಜೇಟ್ಲಿ ಅವರ ಮನವೊಲಿಸುವವರಲ್ಲಿ ನಾನೂ ಇದ್ದೆ,” ಎಂದು ಗುಡುಗಿದರು.

“ನಾನು ಎಂದಿಗೂ ಸಚಿವಾಕಾಂಕ್ಷಿಯಾಗಿರಲಿಲ್ಲ. ಸಿದ್ದಗಂಗಾ ಮಠಕ್ಕೆ ತೆರಳುವಾಗ ಉತ್ತಮ ಸರ್ಕಾರ ನೀಡುವಂತೆ ನಿಮ್ಮನ್ನು ಕೇಳಿಕೊಂಡಿದ್ದೆ, ಹಾಗೂ ಲಿಂಗಾಯತ ಸಮಾಜದ ಹಿರಿಯ ನಾಯಕರಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಹಾಗೂ ಜೆ.ಹೆಚ್.ಪಟೇಲ್ ಅವರಂತಹ ಪರಂಪರೆಯನ್ನು ಮುಂದುವರೆಸುವಂತೆ ಕೇಳಿಕೊಂಡಿದ್ದೆ,” ಎಂದು ಗುಡುಗಿದರು.