ಮನೆಗೆ ನುಗ್ಗಿ ಇಬ್ಬರು ಯುವತಿಯರ ಮೇಲೆ ಗ್ಯಾಂಗ್ ರೇಪ್: ಕಿರುತೆರೆ ನಟ ಸೇರಿ ಮೂವರ ಬಂಧನ

ಬೆಂಗಳೂರು:ಮೇ-20:(www.justkannada.in) ಮನೆಗೆ ನುಗ್ಗಿ ಬೆದರಿಸಿ ಮೇಕಪ್‌ ಆರ್ಟಿಸ್ಟ್‌ ಮತ್ತು ನರ್ಸಿಂಗ್‌ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ಆರೊಪಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಸೇರಿದಂತೆ ಮೂವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಕಿರುತೆರೆ ನಟ ರಾಕೇಶ್‌(24), ಮಣಿಕಂಠ(25) ಮತ್ತು ಸೂರ್ಯ(23) ಬಂಧಿತರು. ಕೋರಮಂಗಲ ಠಾಣೆ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿರುವ ಸಂತ್ರಸ್ಥೆ, ಫ್ರೀಲಾನ್ಸ್‌ ಮೇಕಪ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಸ್ನೇಹಿತೆ ಖಾಸಗಿ ನರ್ಸಿಂಗ್‌ ಕಾಲೇಜಿನಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು.

ಕಿರುತೆರೆ ನಟ ರಾಕೇಶ್‌ ಕಾರುಚಾಲಕ ಮಣಿಕಂಠ ಹಾಗೂ ಮತ್ತೊಬ್ಬ ಆರೋಪಿ ಪನಿಪೂರಿ ಅಂಗಡಿ ನಡೆಸುತ್ತಿದ್ದ ಸೂರ್ಯ ಮೂವರು ಸ್ನೇಹಿತರು. ಮೇ 12ರಂದು ಸಂಜೆ ಯುವತಿಯರಿಬ್ಬರು ಹೊರಗೆ ಹೋಗಿ ವಾಪಸ್‌ ಮನೆಗೆ ಮರಳಿದ್ದರು. ನಂತರ ಕೆಎಫ್‌ಸಿಯಿಂದ ಊಟ ಆರ್ಡರ್‌ ಮಾಡಿ ಮನೆಯಲ್ಲಿ ಕಾಯುತ್ತಿದ್ದರು. ರಾತ್ರಿ 8.20ರ ಸುಮಾರಿಗೆ ಬಾಗಿಲು ಬಡಿದಾಗ, ಯಾರು ಬಂದಿದ್ದಾರೆಂದು ನೋಡಲು ಬಾಗಿಲು ತೆಗೆದಿದ್ದಾರೆ. ಕೂಡಲೇ ಮೂವರು ಮನೆಯೊಳಗೆ ನುಗ್ಗಿ ಚಾಕು ತೋರಿಸಿ ಬೆದರಿಕೆ ಹಾಕಿದ್ದಾರೆ.

ಒಬ್ಬ ವ್ಯಕ್ತಿ ತನ್ನನ್ನು ಬಲವಂತವಾಗಿ ಕೊಠಡಿಗೆ ಕರೆದೊಯ್ದು ಅತ್ಯಾಚಾರ ಮಾಡಿ ದೌರ್ಜನ್ಯ ಎಸಗಿದ್ದಾನೆ. ನಂತರ ಮತ್ತೊಬ್ಬ ವ್ಯಕ್ತಿ ಸ್ನೇಹಿತೆಯನ್ನು ಕೊಠಡಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಅದಾದ ನಂತರ ಮತ್ತೊಬ್ಬ ವ್ಯಕ್ತಿಯೂ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಚಾಕು ತೋರಿಸಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ಥೆ ವಿವರಿಸಿದ್ದಾರೆ.

ಸಾಮೂಹಿಕ ಅತ್ಯಾಚಾರ, ಬೆದರಿಕೆ, ಅತಿಕ್ರಮ ಪ್ರವೇಶ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮನೆಗೆ ನುಗ್ಗಿ ಇಬ್ಬರು ಯುವತಿಯರ ಮೇಲೆ ಗ್ಯಾಂಗ್ ರೇಪ್: ಕಿರುತೆರೆ ನಟ ಸೇರಿ ಮೂವರ ಬಂಧನ
bangalore,two girls gang raped, three arrested,koramangala police