ಪಾನಿಪುರಿ ಯಂತ್ರ ಪರಿಚಯಿಸಿದ ಮಿ.ಪಾನಿಪುರಿ: ಹೊಸ ಆವಿಷ್ಕಾರಕ್ಕೆ ಫಿದಾ ಆದ ಜನತೆ

ಬೆಂಗಳೂರು:ಜೂ-26:(www.justkannada.in) ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ದಿನಕ್ಕೊಂದು ಹೊಸ ಆವಿಷ್ಕಾರಗಳು ಅಗುತ್ತಲೇ ಇರುತ್ತದೆ. ಈಗ ಈ ಆವಿಷ್ಕಾರ ಪಾನಿಪುರಿಯನ್ನೂ ಬಿಟ್ಟಿಲ್ಲ. ಹೌದು. ಜನರ ನೆಚ್ಚಿನ ಪಾನಿಪೂರಿ ಅಥವಾ ಗೋಲ್ ಗುಪ್ಪಾ ತಯಾರಿಸುವ ಹೊಸ ಯಂತ್ರವೊಂದು ಬೆಂಗಳೂರು ನಗರದಲ್ಲಿ ಗಮನಸೆಳೆಯುತ್ತಿದೆ.

ಮಿ.ಪಾನಿಪುರಿ ಸ್ನ್ಯಾಕ್ಸ್ ಅಂಗಡಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ, ಅತ್ಯಾಧುನಿಕ ಮತ್ತು ರುಚಿಕರ ಪರಿಶುದ್ಧ ಪಾನಿಪುರಿ ನೀಡುವ ಯಂತ್ರ ಪರಿಚಯಿಸಿದೆ. ದೇಶದ ಮೊದಲ ಪಾನಿಪುರಿ ಯಂತ್ರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪರಿಚಯಿಸಲಾಗಿತ್ತು. ಅದನ್ನು ಕಂಡ ಮಿ.ಪಾನಿಪುರಿಯ ತೇಜಸ್ ಎಂಬುವವರು, ಬೆಂಗಳೂರಿಗರಿಗೂ ಈ ಉತ್ತಮ ಗುಣಮಟ್ಟದ ಪಾನಿಪುರಿ ನೀಡುವ ಯಂತ್ರವನ್ನು ಪರಿಚಯಿಸಿದ್ದಾರೆ.

ಈ ಯಂತ್ರದಲ್ಲಿ ನಮ್ಮ ಇಷ್ಟದ ಪಾನಿಪುರಿಯನ್ನು ಬೇಕಾದಷ್ಟು, ನಮ್ಮ ರುಚಿಗೆ ಅನ್ವಯವಾಗುವಂತೆ ಸವಿಯಬಹುದು. ಯಂತ್ರದಲ್ಲಿ ಖಾರ, ಮೀಡಿಯಂ ಮತ್ತು ಸ್ವೀಟ್ ಎಂಬ ಮೂರು ಆಪ್ಶನ್ ಇದ್ದು, ಸೆನ್ಸರ್ ಆಧರಿತ ಯಂತ್ರದಲ್ಲಿ ನಮ್ಮ ಆಯ್ಕೆಯನ್ನು ಒತ್ತಿ, ಪೂರಿಯನ್ನು ತಟ್ಟೆಯಲ್ಲಿ ಹಾಕಿ ಕೈಯೊಡ್ಡಿದರೆ, ಪಾನಿ ಸುರಿಯುತ್ತದೆ.

ಸಧ್ಯ ಬೆಂಗಳೂರಿನ ಮಾಗಡಿ ರಸ್ತೆಯ ಜಿಟಿ ವರ್ಲ್ಡ್ ಮಾಲ್ ಮತ್ತು ಬಿನ್ನಿಪೇಟೆಯ ಇಟಿಎ ಮಾಲ್‌ನಲ್ಲಿ ಈ ಯಂತ್ರ ಕಾರ್ಯನಿರ್ವಹಿಸುತ್ತಿದೆ. ವಿವಿಧ ಫ್ಲೇವರ್‌ನ ಪಾನಿಪುರಿ ಇದರಲ್ಲಿ ಲಭ್ಯವಿದ್ದು, ಖಾರ ಮತ್ತು ಸಿಹಿ ಪಾನಿ ಇದರಲ್ಲಿ ತುಂಬಿರಿಸಲಾಗಿದೆ. ಈ ಯಂತ್ರಕ್ಕೆ 6 ಲಕ್ಷ ರೂ. ವೆಚ್ಚತಗುಲಿದ್ದು, ಹೊಸ ಆವಿಷ್ಕಾರದೊಂದಿಗೆ ಜನರಮುಂದೆ ಬಂದಿರುವ ಪಾನಿಪೂರಿ ಯಂತ್ರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಾನಿಪುರಿ ಯಂತ್ರ ಪರಿಚಯಿಸಿದ ಮಿ.ಪಾನಿಪುರಿ: ಹೊಸ ಆವಿಷ್ಕಾರಕ್ಕೆ ಫಿದಾ ಆದ ಜನತೆ
Bangalore,Pani Puri Machine,Mr.Pani Puri