ಮಾಜಿ ಪ್ರೇಯಸಿಗೆ ಬ್ಲ್ಯಾಕ್ ಮೇಲ್: ಟೆಕ್ಕಿ ಬಂಧನ

ಬೆಂಗಳೂರು:ಜೂ-1:(www.justkannada.in) ಮಾಜಿ ಪ್ರೇಯಸಿಗೆ ಆಕೆಯ ಖಾಸಗಿ ಫೋಟೋಗಳನ್ನು ಈ ಮೇಲ್ ಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಟೆಕ್ಕಿಯೋರ್ವನನ್ನು ಬೆಂಗಳೂರಿನ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕೋರಮಂಗಲ ನಿವಾಸಿ ಕೊಲ್ಕತ ಮೂಲದ 31 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಕೊಲ್ಕತ ಮೂಲದ ಸಾಯನ್ ಉಪಾಧ್ಯಾಯ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂತ್ರಸ್ತೆ ಕೋಲ್ಕತದಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆರೋಪಿ ಸಾಯನ್ ಪರಿಚಯವಾಗಿತ್ತು. ಇಬ್ಬರ ಸ್ನೇಹ ಪ್ರೀತಿಗೂ ತಿರುಗಿತ್ತು. ಆದರೆ ಸಾಯನ್ ವರ್ತನೆಯಿಂದ ಬೇಸತ್ತು ಸಂತ್ರಸ್ತೆ ದೂರ ಸರಿದು 2015ರಲ್ಲಿ ಬೋರೊಬ್ಬರನ್ನು ವಿವಾಹವಾಗಿದ್ದರು. ನಂತರ ಪತಿ ಜತೆ ಬೆಂಗಳೂರಿನಲ್ಲಿ ನೆಲೆಸಿದ್ದಳು.

ನಾಲ್ಕು ವರ್ಷಗಳಿಂದ ಸುಮ್ಮನೆ ಇದ್ದ ಆರೋಪಿ ಇತ್ತೀಚಿನ ಕೆಲ ದಿನಗಳಿಂದ ಆಕೆ ಜತೆಗಿನ ಹಳೇ ಫೋಟೋಗಳನ್ನೆಲ್ಲಾ ಕಳುಹಿಸುತ್ತಾ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದ. ಸಾಯನ್‌ ಕೂಡ ಬೆಂಗಳೂರಿನಲ್ಲೇ ಮತ್ತೊಂದು ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿಕೊಂಡಿದ್ದ. ಮಾಜಿ ಪ್ರೇಯಸಿ ಕುಟುಂಬ ಕೂಡ ಬೆಂಗಳೂರಿಗೆ ವರ್ಗವಾಗಿರುವುದು ಗೊತ್ತಾಗುತ್ತಿದ್ದಂತೆ ಸಾಯನ್‌ ತನ್ನ ಹಳೆ ಚಾಳಿ ಆರಂಭಿಸಿದ್ದ. ಇದರಿಂದ ಬೇಸತ್ತ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಸಾಯನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವನ್ನು ವಿವೇಕ್​ನಗರ ಠಾಣೆಗೆ ಹಸ್ತಾಂತರಿಸಲಾಗಿದೆ.

ಮಾಜಿ ಪ್ರೇಯಸಿಗೆ ಬ್ಲ್ಯಾಕ್ ಮೇಲ್: ಟೆಕ್ಕಿ ಬಂಧನ
Bangalore,Blackmailing,ex girlfriend,techie arrested