ಕನ್ನಡ ಭಾಷೆಯ ಶ್ರೀಮಂತಿಕೆ ಉಳಿಸಿ ಬೆಳೆಸೋಣ. ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸೋಣ- ಪ್ರೊ. ವೇಣುಗೋಪಾಲ್ ಕೆ ಆರ್ ಕರೆ.

ಬೆಂಗಳೂರು,ಅಕ್ಟೋಬರ್,28,2021(www.justkannada.in):  ಮಾತೃಭಾಷೆಯನ್ನು ಗೌರವಿಸುವುದು ತಾಯಿಯನ್ನು ಗೌರವಿಸಿದಂತೆ. ಮಾತೃ ಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸೋಣ. ನಮ್ಮ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸೋಣ ಎಂದು ಬೆಂಗಳೂರು ವಿವಿ ಕುಲಪತಿ ಪ್ರೊ. ವೇಣುಗೋಪಾಲ್ ಕೆ ಆರ್ ಹೇಳಿದರು.

“ಕನ್ನಡಕ್ಕಾಗಿ ನಾವು” ಅಭಿಯಾನದ ಅಂಗವಾಗಿ ಗುರುವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವಿಶ್ವ ವಿದ್ಯಾಲಯದ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನನಲ್ಲಿ ಕನ್ನಡಿಗನಾಗಿ ಹುಟ್ಟಿ, ಇಲ್ಲಿ ವಾಸಿಸುತ್ತಿರುವ ನಾವು ಕನ್ನಡ ನಾಡು ನುಡಿ ರಕ್ಷಣೆಗೆ ಪಣ ತೊಡಬೇಕಿದೆ. ಈಗಾಗಲೇ ಸರ್ಕಾರದ ಆದೇಶದಂತೆ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತದಲ್ಲಿ ಕನ್ನಡ ಕಡ್ಡಾಯ ಮಾಡಿದ್ದು, ನಿತ್ಯ ವ್ಯವಹಾರದಲ್ಲಿ ಕನ್ನಡವನ್ನು ಬಳಲಾಸುತ್ತಿದೆ. ಇದು ಮುಂದುವರಿಯಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ನಾವು ಕನ್ನಡ ಉಳಿಸಿ ಬೆಳೆಸುವ ಜೊತೆಗೆ ಕರ್ನಾಟಕದಲ್ಲಿ ವಾಸವಾಗಿರುವ ಬೇರೆ ರಾಜ್ಯದ ಜನರಿಗೂ ಕನ್ನಡ ಕಲಿಸುವ ಮೂಲಕ ನಮ್ಮ ಭಾಷೆಯ ರಕ್ಷಣೆಗೆ ಮುಂದಾಗಬೇಕಿದೆ. ಆ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವ ಬದ್ಧತೆಯನ್ನು ನಾವು ಮೆರೆಯಬೇಕಿದೆ ಎಂದರು.

ನಂತರ ಕುಲಪತಿಗಳು ನೆರೆದವರಿಗೆ ಸಂಕಲ್ಪ ಬೋಧಿಸಿದರು.ಕಾರ್ಯಕ್ರಮದಲ್ಲಿ  ಸರ್ಕಾರ ನಿರ್ದೇಶಿಸಿದ ಮೂರು ಕನ್ನಡ ಗೀತೆಗಳನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ಕುಲಸಚಿವರು (ಮೌಲ್ಯಮಾಪನ), ಪ್ರೊ. ಜೆ. ಟಿ  ದೇವರಾಜು, ಸಿಂಡಿಕೇಟ್ ಸದಸ್ಯರು, ವಿವಿಧ ನಿಖಾಯದ ಡೀನರು, ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು, ಬೋಧಕರು, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

Key words: Bangalore university richness – Kannada language-spread -our culture -Venugopal K R.