ಊಟ ಹಾಕಿಸುವುದಾದ್ರೆ ನಿರ್ಗತಿಕರಾಗಿರುವ ಕಾಂಗ್ರೆಸ್ ನಾಯಕರಿಗೆ ಹಾಕಿಸಲಿ-ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಚಿವ ಆರ್.ಅಶೋಕ್ ತಿರುಗೇಟು..

ಬೆಂಗಳೂರು,ಫೆ,10,2020(www.justkannada.in):  ರಾಮನಗರದಲ್ಲಿ ನಿನ್ನೆ ಆರ್ ಎಸ್ ಎಸ್ ಜಾಥಾ ನಡೆದ ಹಿನ್ನೆಲೆ ಎಷ್ಟು ಕಾರ್ಯಕರ್ತರನ್ನ ಕರೆದುಕೊಂಡು ಬರ್ತಾರೋ ಕರೆದುಕೊಂಡು ಬರಲಿ. ಬೇಕಾದ್ರೆ ನಾನೇ ಊಟದ ವ್ಯವಸ್ಥೆ ಮಾಡುತ್ತೇನೆ ಎಂದು ವ್ಯಂಗ್ಯವಾಡಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಇದು ಡಿ.ಕೆ ಶಿವಕುಮಾರ್ ಅವರ ಅಹಂಕಾರದ ಪರಮಾವಧಿ. ಕಾಂಗ್ರೆಸ್ ನಾಯಕರು ಈಗ ನಿರ್ಗತಿಕರಾಗಿದ್ದಾರೆ. ಊಟ ಹಾಕಿಸುವುದಾದರೇ ನಿರ್ಗತಿಕರಾಗಿರುವ ‘ಕೈ’ ನಾಯಕರಿಗೆ ಊಟ ಹಾಕಿಸಲಿ ಎಂದು ಡಿ.ಕೆ ಶಿವಕುಮಾರ್ ಗೆ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಆರ್. ಅಶೋಕ್,  ಕಪಾಲ ಬೆಟ್ಟದ ಸುತ್ತಮುತ್ತ ಮತಾಂತರ ಚಟುವಟಿಕೆಗಳು ನಡೆಯುತ್ತಿರುವುದು ನಿಜ. ಒಂದೇ ಕೋಮಿಗೆ ಭೂಮಿ ಹಂಚಿಕೆ ಮಾಡಲಾಗುತ್ತಿದೆ.  ಅಲ್ಲದೇ ಸರ್ಕಾರಿ ಜಾಗ ಲಪಟಾಯಿಸುವ ಹುನ್ನಾರ ನಡೆದಿದೆ. ನಾವು ಮುನೇಶ್ವರನ ಆರಾಧಕರು. ಹೀಗಾಗಿ ಮುನೇಶ್ವರ ಬೆಟ್ಟ ಉಳಿಸುತ್ತೇವೆ. ಕಪಾಲಬೆಟ್ಟದಲ್ಲಿ ಯೇಸು ಕ್ರಿಸ್ತರ ಪ್ರತಿಮೆ ನಿರ್ಮಾಣದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಮನಗರ ಭಾಗದಲ್ಲಿ ಹಿಂದೂ ಚಟುವಟಿಕೆ ಹೆಚ್ಚಾಗಿದೆ. ಹೀಗಾಗಿ ಡಿಕೆ ಶಿವಕುಮಾರ್ ಗೆ ಭಯ ಉಂಟಾಗಿದೆ. ಡಿಕೆಶಿಗೆ ಉಳಿದಿರೋದು ಕನಕಪುರ ಕ್ಷೇತ್ರ ಮಾತ್ರ. ಮುಂದಿನ ಚುನಾವಣೆಯಲ್ಲಿ ಜನರು ಕೈ ಹಿಡಿಯಲಾರರು ಎಂಬ ಭಾವನೆಯಿಂದ ಮನಸ್ಸಿಗೆ ಬಂದಂತೆ  ಡಿಕೆಶಿ ಮಾತನಾಡುತ್ತಿದ್ದಾರೆ  ಎಂದು ಆರ್.ಅಶೋಕ್ ಲೇವಡಿ ಮಾಡಿದರು.

Key words: Bangalore-minister- R.Ashok-tong-former minister –dk Shivakumar