ವಾಜಪೇಯಿ ಗೌರವಾರ್ಥ ಸುಶಾಸನ ದಿನ: ‘ಮಿಡ್‌ನೈಟ್‌ ವಾಕಥಾನ್‌’ಗೆ ಸಾಕ್ಷಿಯಾದ ಮಲ್ಲೇಶ್ವರಂ

ಬೆಂಗಳೂರು, ಡಿಸೆಂಬರ್ 25, 2022 (www.justkannada.in): ದಿವಂಗತ ಪ್ರಧಾನಿ ವಾಜಪೇಯಿ ಅವರ 98ನೇ ಜನ್ಮದಿನದ ಅಂಗವಾಗಿ ‘ನಮ್ಮ ಮಲ್ಲೇಶ್ವರಂ’ ಮತ್ತು ಡಾ.ಸಿ ಎನ್ ಅಶ್ವತ್ಥನಾರಾಯಣ ಪ್ರತಿಷ್ಠಾನದ ವತಿಯಿಂದ ಕ್ಷೇತ್ರದ ವ್ಯಾಪ್ತಿಯಲ್ಲಿ ‘ಮಿಡ್‌ನೈಟ್‌ ವಾಕಥಾನ್‌’ ನಡೆಸುವ ಮೂಲಕ ‘ಸುಶಾಸನ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಳು ಸಾವಿರಕ್ಕೂ ಹೆಚ್ಚು ಜನರು ಸಂಭ್ರಮೋತ್ಸಾಹಗಳಿಂದ ಭಾಗವಹಿಸಿದ್ದರು.

ಶನಿವಾರ ರಾತ್ರಿ 11 ಗಂಟೆಗೆ ಸರಿಯಾಗಿ ಮಲ್ಲೇಶ್ವರಂ ಆಟದ ಮೈದಾನದಿಂದ ಆರಂಭವಾದ ವಾಕಥಾನ್‌, ಬಳಿಕ ರಾಜಮಹಲ್‌ ಗುಟ್ಟಹಳ್ಳಿಯ ಯುಪಿಎಚ್‌ಸಿ, ಗುಟ್ಟಹಳ್ಳಿ ಸ್ಕೈವಾಕ್‌, ಸ್ಯಾಂಕಿ ಕೆರೆ, 13ನೇ ಅಡ್ಡರಸ್ತೆಯ ಸರಕಾರಿ ಕಾಲೇಜು ಮೂಲಕ ಸಾಗಿ ಚಂದ್ರಶೇಖರ ಆಜಾದ್‌ ಕ್ರೀಡಾಂಗಣದಲ್ಲಿ ಸಂಪನ್ನಗೊಂಡಿತು. ರಾತ್ರಿಯ ಚುಮುಚುಮು ಚಳಿಯನ್ನೂ ಲೆಕ್ಕಿಸದೆ ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದವರು, ವಾಜಪೇಯಿಯವರ ನೆನಪಿನಲ್ಲಿ ಘೋಷಣೆಗಳನ್ನು ಕೂಗಿದರು.

ಇದಕ್ಕೂ ಮೊದಲು 9 ಗಂಟೆಯಿಂದಲೇ ಮಲ್ಲೇಶ್ವರಂ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು. ವಾಕಥಾನ್‌ ಅಂಗವಾಗಿ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿ ಶಾಲೆಗಳ ಮತ್ತು ಹಲವು ಸ್ಥಳೀಯ ಸಂಘಟನೆಗಳ ವತಿಯಿಂದ ದೇಶಭಕ್ತಿ ಗೀತೆಗಳು, ಜನಪದ ಗೀತೆಗಳು, ಚಿತ್ರಗೀತೆಗಳ ಗಾಯನ ಮತ್ತು ಚಿತ್ತಾಕರ್ಷಕ ಸಮೂಹ ನೃತ್ಯಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಫಿನಿಶರ್‍‌ ಮೆಡಲ್, ಪ್ರಮಾಣಪತ್ರ ಪ್ರದಾನ ಮಾಡಲಾಯಿತು. ಜತೆಗೆ, ಪ್ರತಿಯೊಬ್ಬರಿಗೂ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ವಾಜಪೇಯಿಯವರು ಸುಶಾಸನ ಸಂಸ್ಕೃತಿಯನ್ನು ದೇಶಕ್ಕೆ ಪರಿಚಯಿಸಿದ ಮೇರುವ್ಯಕ್ತಿಯಾಗಿದ್ದಾರೆ. ಅವರ ಆದರ್ಶಗಳಿಗೆ ತಕ್ಕಂತೆ ಶಿಕ್ಷಣ ಸೌಲಭ್ಯ, ಕ್ರೀಡಾ ಸೌಲಭ್ಯ, ಆರೋಗ್ಯ ಸೌಲಭ್ಯ, ನಾಗರಿಕ ಸುರಕ್ಷತೆ ಮತ್ತು ಸುಂದರ ಪರಿಸರ ನಿರ್ಮಾಣ ಈ ಐದು ಅಂಶಗಳನ್ನು ಮಾದರಿ ಮಲ್ಲೇಶ್ವರಂ ಅಭಿವೃದ್ಧಿಯ ಆಧಾರಸ್ತಂಭಗಳಾಗಿ ಮಾಡಿಕೊಳ್ಳಲಾಗಿದೆ. ಇದು ನಗರದ ಉಳಿದ ಭಾಗಗಳಿಗೂ ಮಾದರಿಯಾಗಲಿದೆ” ಎಂದರು.

ಇದಲ್ಲದೆ, ಟೈಪ್‌-1 ಮಧುಮೇಹದಿಂದ ಬಳಲುತ್ತಿರುವ ಚಿಕ್ಕ ವಯಸ್ಸಿನ ಮಕ್ಕಳ ಚಿಕಿತ್ಸೆಗೆ ನೆರವಾಗಲು ‘ಪ್ರಾಜೆಕ್ಟ್ ಸೂರ್ಯ’ ಉಪಕ್ರಮದ ಮೂಲಕ ಸಹಾಯಧನ ಮತ್ತು ಇನ್ಸುಲಿನ್‌ ನೀಡುವುದು ವಾಕಥಾನ್‌ನ ಭಾಗವಾಗಿದೆ. ಈ ಮೂಲಕ ಸರಕಾರವನ್ನು ಜನರ ಮನೆ ಬಾಗಿಲಿಗೇ ಕೊಂಡೊಯ್ಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದರು.

ವಾಜಪೇಯಿಯವರ ಗೌರವಾರ್ಥ ತಮ್ಮ ನೇತೃತ್ವದ ಉನ್ನತ ಶಿಕ್ಷಣ, ಐಟಿ-ಬಿಟಿ, ಕೌಶಲ್ಯಾಭಿವೃದ್ಧಿ ಮತ್ತು ಉಳಿದ ಇಲಾಖೆಗಳಲ್ಲಿ ಡಿ.1ರಿಂದಲೇ ‘ಸುಶಾಸನ ಮಾಸಾಚರಣೆ’ ಹಮ್ಮಿಕೊಳ್ಳಲಾಗಿತ್ತು. ಮಲ್ಲೇಶ್ವರಂ ವ್ಯಾಪ್ತಿಯ ಮತ್ತೀಕೆರೆ ಮತ್ತು ಸುಬೇದಾರ್ ಪಾಳ್ಯಗಳಲ್ಲಿ ಸಮಗ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗಿದ್ದು, ‘ನಮ್ಮ ಕ್ಲಿನಿಕ್‌’ಗಳನ್ನು ಸ್ಥಾಪಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಅವರು ನುಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.