ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೇಶನ ಇ-ಹರಾಜು: ಮೊದಲ ಹಂತದಲ್ಲಿ ಉತ್ತಮ ಪ್ರತಿಕ್ರಿಯೆ

ಬೆಂಗಳೂರು, ಆಗಸ್ಟ್ 07, 2020 (www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮೊದಲ ಹಂತರ ನಿವೇಶನ ಇ-ಹರಾಜಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇ-ಹರಾಜು ಮೂಲಕ ನಿವೇಶನಗಳನ್ನು ವಿಲೇವಾರಿ ಮಾಡಲು ಸಂಖ್ಯೆ ಬೆಂಅಪ್ರಾ ಅಸ/ಇ-ಹರಾಜು/ಟಿ-02/2020-21, ದಿನಾಂಕ 14.07.2020 ಅಧಿಸೂಚನೆ ಹೊರಡಿಸಿ ವಿವಿಧ ಬಡಾವಣೆಗಳ 308 ನಿವೇಶನಗಳನ್ನು ಹರಾಜಿಗಿಡಲಾಗಿತ್ತು.

ದಿನಾಂಕ 20.07.2020ರಂದು ಪ್ರಾರಂಭಗೊಂಡ ಇ-ಹರಾಜಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಉತ್ತಮ ಪ್ರತಿಕ್ರಿಯೆ ಬಂದಿದೆ. ಮೊದಲ ಹಂತದಲ್ಲಿ ಒಟ್ಟು 75 ನಿವೇಶನಗಳನ್ನು ಹರಾಜಿಗಿಟ್ಟಿದ್ದು, ಅವುಗಳಲ್ಲಿ 67 ನಿವೇಶನಗಳು ಮಾರಾಟವಾಗಿದೆ.

ಆರಂಭಿಕ ಬಿಡ್ ದರಕ್ಕಿಂತ ದುಪ್ಪಟ್ಟು ದರವನ್ನು ನಮೂದಿಸಿ ಕೆಲವು ನಿವೇಶನಗಳನ್ನು ಖರೀದಿಸಿರುತ್ತಾರೆ. ಉದಾಹರಣೆಗೆ ಬನಶಂಕರ 6ನೇ ಹಂತ 11ನೇ ಬ್ಲಾಕ್ ನಿವೇಶನ ಸಂಖ್ಯೆ 936 ಮತ್ತು 937ಕ್ಕೆ ಆರಂಭಿಕ ಠೇವಣಿ ರೂ. 58,370/- ನಿಗದಿಪಡಿಸಿದ್ದು, ಬಿಡ್ ದರವು ದುಪ್ಪಟ್ಟು ಅಂದರೆ ಕ್ರಮವಾಗಿ ರೂ. 134370/- ಮತ್ತು ರೂ. 13,8870/- ಬಿಡ್ ಮಾಡಿ ಖರೀದಿಸಿರುತ್ತಾರೆ.

ಯಶಸ್ವಿ ಬಿಡ್‍ದಾರರು ನಿವೇಶನದ ಮೌಲ್ಯದ ಶೇಕಡ 25ರಷ್ಟು ಹಣವನ್ನು ಇ.ಎಂ.ಡಿ ಮೌಲ್ಯ ಕಡಿತಗೊಳಿಸಿ, ಮೂರು ದಿನಗಳೊಳಗಾಗಿ ಪ್ರಾಧಿಕಾರ ಖಾತೆಗೆ ಪಾವತಿಸಬೇಕಾಗಿದೆ. ಪಾವತಿ ಮಾಡಿರುವ ಚಲನ್‍ಅನ್ನು ಪ್ರಾಧಿಕಾರದ ಆರ್ಥಿಕ ವಿಭಾಗಕ್ಕೆ ಸಲ್ಲಿಸಬೇಕು. ಯಶಸ್ವಿ ಬಿಡ್‍ದಾರರಿಗೆ ಪ್ರಾಧಿಕಾರದಿಂದ ಪತ್ರವನ್ನು ಕಳುಹಿಸಲಾಗುವುದು. ಪತ್ರ ತಲುಪಿದ ನಂತರ ಉಳಿದ ನಿವೇಶನದ ಮೌಲ್ಯವನ್ನು 45 ದಿನಗಳೊಳಗಾಗಿ ಪ್ರಾಧಿಕಾರದ ಖಾತೆಗೆ ಪಾವತಿಸಬೇಕು. 45 ದಿನಗಳ ಒಳಗೆ ಹರಾಜು ನಿವೇಶನದ ಮೌಲ್ಯವನ್ನು ಪಾವತಿಸದಿದ್ದಲ್ಲಿ, ನಿವೇಶನವನ್ನು ರದ್ದುಗೊಳಿಸಿ, ಇ.ಎಂ.ಡಿ. ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.