ಮೈಸೂರು,ಜನವರಿ,7,2026 (www.justkannada.in): ಕರ್ನಾಟಕ ಸರ್ಕಾರದ ರಂಗಾಯಣ, ಮೈಸೂರು ವತಿಯಿಂದ ಆಯೋಜಿಸಲಾಗಿರುವ ಬಹುರೂಪಿ ರಾಜ್ಯ ನಾಟಕೋತ್ಸವ–2026 ಈ ಬಾರಿ 25ನೇ ವರ್ಷದ ಬೆಳ್ಳಿ ಹಬ್ಬವಾಗಿ, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ಸ್ಮರಣಾರ್ಥ ಸಾಂಸ್ಕೃತಿಕ ಅನುಸಂಧಾನದೊಂದಿಗೆ ನಡೆಯಲಿದೆ ಎಂದು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರು ತಿಳಿಸಿದರು.
ಇಂದು ರಂಗಾಯಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನವರಿ 11ರಿಂದ 18ರವರೆಗೆ ಎಂಟು ದಿನಗಳ ಕಾಲ ನಡೆಯುವ ಈ ನಾಟಕೋತ್ಸವದಲ್ಲಿ ಒಟ್ಟು 24 ನಾಟಕಗಳು ಪ್ರದರ್ಶನಗೊಳ್ಳಲಿದ್ದು, ಇದರಲ್ಲಿ 12 ನಾಟಕಗಳು ವಿವಿಧ ಭಾಷೆಗಳಲ್ಲಿವೆ ಎಂದರು.
ಜೊತೆಗೆ ಆರು ಮಕ್ಕಳ ಬಹುರೂಪಿ ನಾಟಕಗಳು, ಮೂರು ಕನ್ನಡ ಹಾಗೂ ಮೂರು ಇಂಗ್ಲಿಷ್ ನಾಟಕಗಳು ಪ್ರದರ್ಶನಗೊಳ್ಳಲಿವೆ.
ನಾಟಕೋತ್ಸವವನ್ನು ಜನವರಿ 11ರಂದು ಖ್ಯಾತ ಬರಹಗಾರ ಬರಗೂರು ರಾಮಚಂದ್ರಪ್ಪ ಅವರು ಬಹುರೂಪಿ ಚಲನಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ. ಜನವರಿ 12ರಂದು ಬೆಳಿಗ್ಗೆ ಮಕ್ಕಳ ಬಹುರೂಪಿ ನಾಟಕೋತ್ಸವವನ್ನು ಹಿರಿಯ ರಂಗಕರ್ಮಿ ರಾಮೇಶ್ವರಿ ವರ್ಮಾ ಅವರು ಉದ್ಘಾಟಿಸಲಿದ್ದಾರೆ.
, “ನಾಟಕ, ಸಂಗೀತ, ಚಿತ್ರಕಲೆ ಮತ್ತು ಚಲನಚಿತ್ರಗಳ ಮೂಲಕ ಬಾಬಾಸಾಹೇಬರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ವಿಚಾರಧಾರೆಯನ್ನು ಪರಿಚಯಿಸುವ ಪ್ರಯತ್ನ ಇದಾಗಿದೆ” ಎಂದರು.
ಈ ಹಿನ್ನೆಲೆಯಲ್ಲಿ ‘Musical Narrative of Babasaheb’ ಎಂಬ ವಿಶೇಷ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಬಾಬಾಸಾಹೇಬರ ಜೀವನ ಮತ್ತು ಚಿಂತನೆಗಳನ್ನು ಹಾಡುಗಳ ಮೂಲಕ ನಿರೂಪಿಸಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಪಂಜಾಬ್ ನ ಖ್ಯಾತ ಗಾಯಕಿ ಗಿನ್ನಿಮಾಯಿ, ಜೊತೆಗೆ ಮರಾಠಿ ಹಾಗೂ ಕನ್ನಡ ಗಾಯಕರು ಭಾಗವಹಿಸಲಿದ್ದಾರೆ. ಇದು ನಾಟಕೋತ್ಸವದ ಪ್ರಮುಖ ಆಕರ್ಷಣೆಯಾಗಲಿದೆ.
ಇದೇ ವೇಳೆ ‘ಭೀಮಾಯನ’ ಎಂಬ ವಿಶೇಷ ಕಲಾತ್ಮಕ ಪ್ರಯೋಗದ ಮೂಲಕ ಪೇಂಟಿಂಗ್ ಮತ್ತು ಬಣ್ಣಚಿತ್ರಗಳ ಮೂಲಕ ಬಾಬಾಸಾಹೇಬರ ವಿಚಾರಧಾರೆಯನ್ನು ಮಕ್ಕಳಿಗೂ ಸುಲಭವಾಗಿ ಅರ್ಥವಾಗುವಂತೆ ಪರಿಚಯಿಸಲಾಗುತ್ತಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನೆ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಎಸ್.ನರೇಂದ್ರಕುಮಾರ್, ಹಿರಿಯ ಪ್ರಾಧ್ಯಾಪಕರು ಡಾ.ಜೆ.ಸೋಮಶೇಖರ್, ಗೌರವ ಸಲಹೆಗಾರರು ಬಸವರಾಜು ದೇವನೂರು,ರಂಗಾಯಣದ ಉಪ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಚಲನಚಿತ್ರೋತ್ಸವದ ಸಂಚಾಲಕಿ ,ಶಶಿಕಲಾ ಬಿ.ಎನ್, ಸಂಯೋಜಕ ಮನು ಕೆ ಸೇರಿದಂತೆ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
Key words: 25th annual, Bahurupi Drama Festival, Rangayana, January 11







