ಸಾರಿಗೆ ನೌಕರರ ಮುಷ್ಕರ: ಸಿಎಂ ತಕ್ಷಣವೇ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಿ- ಬಿ.ವೈ.ವಿಜಯೇಂದ್ರ

ಬೆಂಗಳೂರು, ಆಗಸ್ಟ್‌ 05,2025 (www.justkannada.in): ಸರ್ಕಾರಿ ಸಾರಿಗೆ ನೌಕರರ ಮುಷ್ಕರಕ್ಕೆ ಕೂಡಲೇ ಪರಿಹಾರ ನೀಡಬೇಕು ಸಿಎಂ  ಸಿದ್ದರಾಮಯ್ಯ ಅವರು ತಕ್ಷಣವೇ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ಆಗ್ರಹಿಸಿದರು.

ಈ ಕುರಿತು ಇಂದು ಮಾಧ್ಯಮಗಳ ಜೊತೆಗೆ  ಮಾತನಾಡಿದ ಬಿ ವೈ ವಿಜಯೇಂದ್ರ, ಮುಷ್ಕರದಿಂದ ಬಸ್ ಸಿಗದೇ ಗ್ರಾಮೀಣ ಭಾಗದಲ್ಲಿ ಶಾಲಾ ಮಕ್ಕಳಿಗೆ ತೀವ್ರ ಸಮಸ್ಯೆ ಆಗಿದೆ. ಜನರಿಗೆ ತೊಂದರೆಯಾಗುತ್ತಿದೆ. ಗ್ಯಾರಂಟಿ ಯೋಜನೆಯಿಂದ ಹಳ್ಳಿಗಳಲ್ಲಿ ಬಸ್ ಗಳನ್ನ ಕಡಿತ ಮಾಡಿದ್ದೀರಿ ಇದರಿಂದ ಬಸ್ ಗಳಿಲ್ಲದೆ ಈಗ ತೊಂದರೆಗೊಳಗಾಗಿದ್ದಾರೆ.  ಸರಕಾರಿ ಬಸ್ಸಿಲ್ಲದೆ ಕಾಲೇಜು, ಶಾಲಾ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದರು.

ಕೆಎಸ್‍ ಆರ್‍ಟಿಸಿ ಮತ್ತಿತರ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ಕೊಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಹಳ ತಿಂಗಳುಗಳಿಂದ ಆರ್ಥಿಕ ಮುಗ್ಗಟ್ಟು ಇದ್ದು, ಸಮಸ್ಯೆ ಉಲ್ಬಣವಾಗಿದೆ. ಹಾಗಾಗಿ ಅವರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಡ ಮಾಡದೇ, ತಕ್ಷಣವೇ ಕಾರ್ಮಿಕರ ಮತ್ತು ಅಧಿಕಾರಿಗಳ ಸಭೆ ಕರೆಯಬೇಕು. ತಕ್ಷಣವೇ ಸಭೆ ಕರೆದು ಸೂಕ್ತತೀರ್ಮಾನ ತೆಗೆದಕೊಳ್ಳಬೇಕು ಇವತ್ತೇ ಸಭೆ ಕರೆದು ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.

Key words: Transport employees, strike,  CM, meeting, B.Y. Vijayendra