ಅಯೋಧ್ಯೆ ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ, ರಾಮನಗರದ ರೇಷ್ಮೆ ಸೀರೆ, ಶಲ್ಯ ಕೊಡುಗೆ- ಸಚಿವ ಅಶ್ವಥ್ ನಾರಾಯಣ್.

ಬೆಂಗಳೂರು, ಡಿಸೆಂಬರ್, 13,2022(www.justkannada.in):  ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ರಾಮನಗರ ಜಿಲ್ಲೆಯ 150 ಮಂದಿಯ ತಂಡದೊಂದಿಗೆ ಬುಧವಾರ ತೆರಳಿ ಒಂದು ಬೆಳ್ಳಿ ಇಟ್ಟಿಗೆ, ಸ್ಥಳೀಯ ರೇಷ್ಮೆ ಸೀರೆ ಮತ್ತು ಶಲ್ಯವನ್ನು ಕಾಣಿಕೆಯಾಗಿ ಕೊಡಲಾಗುತ್ತಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ ನಾರಾಯಣ್ ತಿಳಿಸಿದ್ದಾರೆ.

ಮಂಗಳವಾರ ಈ ಬಗ್ಗೆ ಮಾತನಾಡಿರುವ ಸಚಿವ ಅಶ್ವಥ್ ನಾರಾಯಣ್, ರಾಮದೇವರ ಬೆಟ್ಟದ ತಾಣವಾದ ರಾಮನಗರ ಮತ್ತು ರಾಮನ ಮೂಲತಾಣ ಅಯೋಧ್ಯೆ ನಡುವೆ ಪರಂಪರಾಗತ ಸಂಬಂಧವಿದೆ. ಅಲ್ಲಿಂದಲೂ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಿ ತಂದು, ಇಲ್ಲಿನ ರಾಮದೇವರ ಬೆಟ್ಟಕ್ಕೆ ಸಮರ್ಪಿಸಲಾಗುವುದು. ಜತೆಗೆ ರಾಮದೇವರ ಬೆಟ್ಟವನ್ನು ಸಮಗ್ರವಾಗಿ ಜೀರ್ಣೋದ್ಧಾರ ಮಾಡಿ, ಆಕರ್ಷಕ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು  ಎಂದರು.

ರಾಮನಗರವು ರೇಷ್ಮೆಗೆ ಹೆಸರಾಗಿದೆ. ಹೀಗಾಗಿ ಸೀತಾದೇವಿಗೆ ಇಲ್ಲಿನ ರೇಷ್ಮೆ ಸೀರೆ, ರಾಮ & ಲಕ್ಷ್ಮಣರಿಗೆ ಶಲ್ಯ ಕೊಡಲಾಗುವುದು. ರಾಮನಗರದ ರಾಮಭಕ್ತರ ದೇಣಿಗೆಯಿಂದ ಖರೀದಿಸಿರುವ ಬೆಳ್ಳಿ ಇಟ್ಟಿಗೆಗೆ ರಾಮನಗರದ ರಾಮದೇವರ ಬೆಟ್ಟ ಮತ್ತು ಕೆಂಗಲ್ ಹನುಮಂತರಾಯನ ದೇಗುಲದಲ್ಲಿ ವಿಧಿಬದ್ಧವಾಗಿ ಪೂಜೆ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಶ್ರೀರಾಮ ನಮ್ಮ ಸನಾತನ ಸಂಸ್ಕೃತಿ ಮತ್ತು ಮೌಲ್ಯಗಳ ಮೂಲಪುರುಷ ಆಗಿದ್ದಾನೆ. ಸ್ಥಳೀಯರ ತಂಡದೊಂದಿಗೆ ತಾವೂ ತೆರಳುತ್ತಿದ್ದು, ಗುರುವಾರ ಅಯೋಧ್ಯೆಯಲ್ಲಿ ವಿಶೇಷ ಪೂಜೆ ನೆರವೇರಿಸಲಾಗುವುದು. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪ್ರಶಂಸಿಸಿದ್ದಾರೆ ಎಂದು ಅಶ್ವತ್ ನಾರಾಯಣ್ ನುಡಿದರು.

Key words: Ayodhya -Ram Mandir- Ramanagara- silk –saree- gift-  Minister -Aswath Narayan