ಆಗಸ್ಟ್ 10 ರಿಂದ 16ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ.

ರಾಯಚೂರು,ಆಗಸ್ಟ್, 02,2022(www.justkannada.in):  ಕಲಿಯುಗ ಕಾಮಧೇನು ರಾಘವೇಂದ್ರ ಸ್ವಾಮಿಗಳ 351 ನೇ ಆರಾಧನಾ ಮಹೋತ್ಸವಕ್ಕೆ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶ್ರೀ ಮಠದಿಂದ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಶ್ರೀರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದರು.

ಮಂತ್ರಾಲಯ ಶ್ರೀಮಠದಲ್ಲಿ ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇದೇ ಆಗಸ್ಟ್ 10 ರಿಂದ 16 ರವರೆಗೆ ರಾಯರ ಆರಾಧನಾ ಮಹೋತ್ಸವ ನಡೆಯಲಿದ್ದು, ಏಳು ದಿನ ಕಾಲ ಸಪ್ತರಾತ್ರೋತ್ಸವ ನಡೆಯಲಿದೆ. ಇನ್ನೂ ಆಗಸ್ಟ್ 12 ರಂದು ಪೂರ್ವಾರಾಧನೆ ನಿಮಿತ್ಯ ಮೂಲ ಬೃಂದಾವನಕ್ಕೆ ವಿಶೇಷ ಪೂಜಾ ಕಾರ್ಯಕ್ರಮ ಮತ್ತು ಮೂಲ ರಾಮದೇವರ ಪೂಜೆ ನಡೆಯಲಿದೆ. ಸಂಜೆ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಯರ ಅನುಗ್ರಹ ಪ್ರಶಸ್ತಿ ಪ್ರದಾನ, ಗ್ರಂಥಗಳ ಬಿಡುಗಡೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಇನ್ನೂ ಆಗಸ್ಟ್ 13 ರಂದು ಮಧ್ಯಾರಾಧನೆ ಅಂಗವಾಗಿ ಬೆಳಗಿನಿಂದಲೇ ವಿಧೇಷ ಪೂಜೆ ನಡೆಯುತ್ತದೆ. ನಂತರ ತಿರುಪತಿಯಿಂದ ವಿಶೇಷ ಶೇಷ ವಸ್ತ್ರ ಸಮರ್ಪಣೆ ನಡೆಯಲಿದ್ದು ಮೂಲ ಬೃಂದಾವನಕ್ಕೆ ಅಲಂಕಾರ ಮಾಡಲಾಗುವುದು. ಈ ವೇಳೆ ಮಠದ ಪ್ರಾಂಗಣದಲ್ಲಿ ವಿಶೇಷ ಕಾರ್ಯಕ್ರಮಗಳ ಜರುಗಲಿವೆ.

ಆರಾಧನೆಯ ಮುಖ್ಯಘಟ್ಟವಾಗಿ ಆಗಸ್ಟ್ 14 ರಂದು ಉತ್ತರರಾಧನೆ ಹಿನ್ನೆಲೆ ವಿಶೇಷವಾಗಿ ಮೂಲಬೃಂದಾವನದ ನಾಲ್ಕು ಕಡೆಗಳಿಗೆ ವಿಶೇಷ ಪುಷ್ಪಲಂಕಾರ ಮಾಡಲಾಗುತ್ತದೆ. ನಂತರ ಪ್ರಹಲ್ಲಾದ ರಾಯರ ಮಹಾರಥೋತ್ಸವ ಜರುಗಲಿದೆ. ಈ ವೇಳೆ ಮಹಾರಥಕ್ಕೆ ಪ್ರತಿವರ್ಷದಂತೆ ಹೆಲಿಕ್ಯಾಪ್ಟರ್ ಮೂಲಕ ರಥಕ್ಕೆ ಪುಷ್ಪ ವೃಷ್ಠಿ ಮಾಡಲಾಗುತ್ತದೆ. ಆರಾಧನಾ ಮಹೋತ್ಸವ ಹಿನ್ನಲೆ ಏಳುದಿನ ಕಾಲ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ. ಈ ವೇಳೆ ವಯೋವೃದ್ಧರಿಗೆ, ಅಂಗವಿಕಲರಿಗೆ ಶೀಘ್ರವಾಗಿ ದರ್ಶನ ವ್ಯವಸ್ಥೆ.

ನದಿ ತೀರದಲ್ಲಿ ಯಾವುದೇ ಅವಘಡ ಜರುಗದಿರಲು, ಈಜು ತಜ್ಞರು, ಬ್ಯಾರಿಕೇಡ್, ಬೋಟ್ ಸೇರಿದಂತೆ ವಿಶೇಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಭಕ್ತರಿಗೆ ಸ್ನಾನಕ್ಕಾಗಿ 100ಕ್ಕೂ ಹೆಚ್ಚು ಶವರ್ ಗಳನ್ನು ಮಾಡಲಾಗಿದೆ ಎಂದು ಶ್ರೀಗಳು ಹೇಳಿದರು.

Key words: August-10th – 16th– Aradhana Mahotsav – Sri Raghavendra Swami.