ಕಾರಿನಲ್ಲಿ ಬಾಲಕಿಯ ಕಿಡ್ನಾಪ್ ಗೆ ಯತ್ನ; ನಾಲ್ವರ ಬಂಧನ.

ಕೊಳ್ಳೇಗಾಲ, ಜನವರಿ,3,2024(www.justkannada.in):  ಚಾಕೊಲೇಟ್ ಕೊಟ್ಟು ಊಟ ಕೊಡಿಸುವುದಾಗಿ ಹೇಳಿ 16 ವರ್ಷ ಬಾಲಕಿಯನ್ನ ಕಿಡ್ನಾಪ್ ಮಾಡಲು ಯತ್ನಿಸಿದ ನಾಲ್ವರನ್ನ ನಗರದ ಪೊಲೀಸರು ಬಂಧಿಸಿದ್ದಾರೆ.

ಮಲ್ಲಪುರಂ ಜಿಲ್ಲೆಯ ಯಡಪಾಡ್ ಗ್ರಾಮದ ಇಸ್ಮಾಯಿಲ್, ಅಯೂಬ್, ಆಲಿ, ಉಮರ್ ಪೊಲೀಸ್ ಬಂಧಿತ ಆರೋಪಿಗಳು. ಬಂಧಿತರು ಕೇರಳದವರಾಗಿದ್ದು, ನಗರದಲ್ಲಿ ಮನೆ ಮನೆಗೆ ತೆರಳಿ ಕೂದಲು ಸಂಗ್ರಹಿಸುತ್ತಿದ್ದ 16 ವರ್ಷದ ಬಾಲಕಿಯನ್ನು ಮಂಗಳವಾರ ಸಂಜೆ ಅಪಹರಿಸಿ ಕಾರಿನಲ್ಲಿ ಕರೆದೊಯ್ಯುತ್ತಿದ್ದರು.

ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಗ್ರಾಮವೊಂದರ ಬಾಲಕಿ ಹಾಗೂ ಆಕೆಯ ಕುಟುಂಬದ ಸದಸ್ಯರು ಕೂದಲು ಸಂಗ್ರಹ ಮತ್ತು ಮಾರಾಟಕ್ಕಾಗಿ ನಗರಕ್ಕೆ ಬಂದಿದ್ದರು. ಮಂಗಳವಾರ ಸಂಜೆ ನಗರದ ವಾಸವಿ ವಿದ್ಯಾಕೇಂದ್ರದ ಮುಂಭಾಗದಲ್ಲಿ ಬಾಲಕಿ ಕೂದಲು ಸಂಗ್ರಹಿಸುತ್ತಿದ್ದಳು. ಈ ವೇಳೆ ಕುಡಿದ ಮತ್ತಿನಲ್ಲಿದ್ದ ಬಂಧಿತ ನಾಲ್ವರು, ಬಾಲಕಿಗೆ ಚಾಕೊಲೇಟ್ ನೀಡಿ  ಊಟಕೊಡಿಸುವುದಾಗಿ ಹೇಳಿ ಕಾರಿನಲ್ಲಿ ಕೂರಿಸಿಕೊಂಡು ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಬಳಿ ಹೋಗುತ್ತಿದ್ದರು.

ಈ ವೇಳೆ  ಕಾರು ಬೈಕ್‌ ಗೆ ಡಿಕ್ಕಿ ಹೊಡೆದಿದ್ದು,  ಗ್ರಾಮಸ್ಥರು ಕಾರನ್ನು ತಡೆದಿದ್ದಾರೆ. ನಂತರ ಗ್ರಾಮಸ್ಥರು ಕಾರಿನಲ್ಲಿದ್ದವರನ್ನು ನೋಡಿದಾಗ ನಾಲ್ವರು  ನಶೆಯಲ್ಲಿದ್ದು ಬಾಲಕಿಯ ಬಾಯಿಯನ್ನು ಮುಚ್ಚಿದ್ದರು. ಈ ಸಮಯದಲ್ಲಿ ಗ್ರಾಮಸ್ಥರನ್ನು ಕಂಡ ಬಾಲಕಿ ‘ನನ್ನನ್ನು ಅಪಹರಣ  ಮಾಡಿದ್ದಾರೆ’ ಎಂದು ಕಿರುಚಿ ಅಳಲು ಆರಂಭಿಸಿದ್ದಾಳೆ.

ನಂತರ ಗ್ರಾಮಸ್ಥರು ನಾಲ್ವರಿಗೆ ಥಳಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ  ನಡೆಸಿದ್ದು, ಯಾವ ಉದ್ದೇಶಕ್ಕೆ ಆರೋಪಿಗಳು ಬಾಲಕಿಯನ್ನು  ಕಿಡ್ನಾಪ್ ಮಾಡಿದ್ದರು ಎಂಬುದು ತಿಳಿದು ಬಂದಿಲ್ಲ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

Key words: Attempt – kidnap -girl – car; Four- arrested