ಮೈಸೂರು, ಮೇ.೧೪,೨೦೨೫: ಕೆಲ ವಿಕೃತರ ಕಮೆಂಟ್ ಗಳಿಗೆ ಬೇಸರಗೊಂಡ ಕನ್ನಡದ ಜನಪ್ರಿಯ ಯು-ಟ್ಯೂಬರ್ ನಾನಿನ್ನು ಮುಂದೆ ವೀಡಿಯೋಗಳನ್ನು ಹಾಕುವುದಿಲ್ಲ ಎಂದು ವಿದಾಯದ ಪೋಸ್ಟ್ ಹಾಕಿದ್ದಾರೆ.
ದಕ್ಷಿಣ ಕನ್ನಡ ಮೂಲದ ಯುಟ್ಯೂಬರ್ ಅಸೀಮಾ (Asima Dhola) ಅವರೇ ಈ ನಿರ್ಧಾರ ತೆಗೆದುಕೊಂಡಿರುವುದು. ವಿದ್ಯಾರ್ಥಿನಿಯಾಗಿರುವ ಈಕೆ ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದು, ಬಿಡುವಿನ ವೇಳೆಯಲ್ಲಿ ಆ ದೇಶದ ಕಲೆ, ಸಂಸ್ಕೃತಿ, ತಂತ್ರಜ್ಞಾನ, ಜೀವನ ಶೈಲಿ, ಶಿಕ್ಷಣ..ಮುಂತಾದ ವಿಷಯಗಳ ಬಗ್ಗೆ ವೀಡಿಯೋ ಮಾಡಿ ಕನ್ನಡದಲ್ಲಿ ಕಂಟೆಂಟ್ ಹಾಕುತ್ತಿದ್ದರು.
“ ನಮಸ್ತೆ ನಾನು ನಿಮ್ಮ ಅಸೀಮಾ. ಚೈನಾದಿಂದ ಮಾತಾಡ್ತ ಇದ್ದೇನೆ..” ಎಂದೇ ಮಾತಿಗಾರಂಭಿಸುತ್ತಿದ್ದ ಚೆಂದುಳ್ಳಿ ಚೆಲುವೆ ಅಸೀಮಾರ ವೀಡಿಯೋ ಕಂಟೆಂಟ್ ವೀಕ್ಷಿಸಲು ಒಂದು ದೊಡ್ಡ ಫ್ಯಾನ್ ಬೇಸ್ ಇದೆ. ಜತೆಗೆ ಅಪಾರ ಸಂಖ್ಯೆಯ ಫಾಲೋವರ್ಸ್ ಸಹ ಹೊಂದಿದ್ದಾಳೆ ಅಸೀಮಾ, ಇಂಥ ಅಸೀಮಾರ ವೀಡಿಯೋಗಳಿಗೆ ಕೆಲವರು ಅನಗತ್ಯ ಕಮೆಂಟ್ ಗಳನ್ನು ಹಾಕುತ್ತಿದ್ದರು. ಆಕೆ, ಧರ್ಮದ ಬಗ್ಗೆ ಪ್ರಶ್ನಿಸುತ್ತಿದ್ದರು, ಚೀನಾದ ಗುಣಾತ್ಮಕ ಸಂಗತಿ ಹಂಚಿಕೊಂಡಾಗ, ನೀನು ಭಾರತ ದ್ವೇಷಿ ಎಂದು ಕಾಲೆಳೆದಿದ್ದರು. ಈ ಎಲ್ಲವನ್ನು ಮೆಟ್ಟಿನಿಂತು ಅವರಿಗೆ ಸರಿಯಾದ ಪ್ರತ್ಯುತ್ತರ ನೀಡುತ್ತಲೇ ಬಂದಿದ್ದ ಅಸೀಮಾ, ಈಗ ಯಾಕೋ ಈ ಎಲ್ಲಾ ಜಂಜಾಟವೇ ಬೇಡ ಎಂದು ವೀಡಿಯೋ ಹಾಕುವುದನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಆಸೀಮಾಳ ಈ ತೀರ್ಮಾನದಿಂದ ಅನೇಕರು ಬೇಸರಗೊಂಡಿದ್ದು, ದಯವಿಟ್ಟು ವೀಡಿಯೋ ಮಾಡುವುದನ್ನು ನಿಲ್ಲಿಸಬೇಡಿ ಎಂದು ವಿನಂತಿಸಿದ್ದಾರೆ. ಅಸೀಮಾಳ ಪೋಸ್ಟ್ ನಲ್ಲೇ ಸಾವಿರಾರು ಮಂದಿ ಕಮೆಂಟ್ ಮಾಡಿ, ಅಂಧಾಭಿಮಾನಿಗಳ ಟೀಕೆಗೆ ಹಿಂದಡಿ ಇಡಬೇಡಿ. ದಯವಿಟ್ಟು ಮಾಹಿತಿ ನೀಡುವ ವೀಡಿಯೋ ಶೇರ್ ಮಾಡಿ ಎನ್ನುತ್ತಿದ್ದಾರೆ.
ಅಸೀಮಾ ತನ್ನ ಮುಖಪುಸ್ತಕದಲ್ಲಿ ಬರೆದಿರುವುದು ಹೀಗೆ…
ನನ್ನ ಪ್ರೊಫೈಲ್ನಲ್ಲಿ ಬರುವ ಪೋಸ್ಟ್ಗಳು ಸಾಮಾನ್ಯವಾಗಿ ಚೈನಾದ ಜನಜೀವನ ಶೈಲಿ, ಉತ್ತಮ ವ್ಯವಸ್ಥೆಗಳು, ಇಲ್ಲಿಯ ಇಂಟ್ರೆಸ್ಟಿಂಗ್ ವಿಚಾರಗಳನ್ನು ಜನರಿಗೆ ತೋರಿಸುವ ಸಲುವಾಗಿ ಮಾತ್ರ. ಆದರೂ ತುಂಬ ಜನ ಪ್ರತೀಬಾರಿ ಪೊಲಿಟಿಕಲ್ ವಿಚಾರವನ್ನು ತಂದು ಕಮೆಂಟ್ ಹಾಕುತ್ತೀರಿ. ತಮಾಷೆಗಾಗಿಯೇ ಆದರೂ ಅದರ ಅಗತ್ಯತೆ ಎಷ್ಟಿದೆ ಎಂಬುದನ್ನು ಕಮೆಂಟ್ ಹಾಕುವ ಮೊದಲು ಸ್ವಲ್ಪ ಆಲೋಚಿಸಿ. ನನ್ನ ಪ್ರೊಫೈಲ್ನ ಕ್ಯಾಟಗರಿ “ಡಿಜಿಟಲ್ ಕ್ರಿಯೇಟರ್ ಅಷ್ಟೇ”. ನಾನು ಭಾರತೀಯಳು ಎಂಬುದು ವಿಚಾರವೇ ಹೊರತು ಯಾವುದೇ ಪೊಲಿಟಿಕ್ಸ್ ವಿಚಾರ ಅಥವಾ ಪೊಲಿಟಿಷಿಯನ್ ಕ್ಯಾಟಗರಿಯಲ್ಲಿ ನನ್ನ ಪ್ರೊಫೈಲ್ ಬರುವುದಿಲ್ಲ. ಹಾಗೆಯೇ ಅದಕ್ಕೆ ರಿಲೇಟೆಡ್ ಹುದ್ದೆಯಲ್ಲಿ ಇಲ್ಲದ ಸಾಮಾನ್ಯ ವಿದ್ಯಾರ್ಥಿ ನಾನು. ಇಷ್ಟಾಗಿಯೂ ನನ್ನ ಪ್ರತಿಯೊಂದು ಪೋಸ್ಟ್ನಲ್ಲೂ ಪೊಲಿಟಿಕ್ಸ್ ವಿಚಾರ ತರ್ತೀರಾ ಅಂತ ಆದ್ರೆ, ನಾನಿನ್ನು ವೀಡಿಯೋಗಳನ್ನು ಹಾಕುವುದಿಲ್ಲ. ಖಂಡಿತವಾಗಿ ನೀವು ನನ್ನ ಪ್ರೊಫೈಲ್ನಿಂದ ವೀಡಿಯೋಗಳು ಬರುವುದನ್ನು ಎದುರುಗಾಣ್ಬೇಡಿ.
ನನ್ನ ಓದಿನಲ್ಲಿ ಬಿಡುವಿನ ಸಮಯವನ್ನು ನಿಮಗೋಸ್ಕರ ಮೀಸಲಿಡುತ್ತಿದ್ದೆ. ನನ್ನ ವೀಡಿಯೋಗಳು ನಿಮಗೋಸ್ಕರ ಅಷ್ಟೇ, ಹೆಸರು – ಫೇಮಸ್ಸು, ಲೈಕ್ಸ್, ಫಾಲೋ ಇದರಲ್ಲಿ ನನಗೆ ಆಸಕ್ತಿಯಿಲ್ಲ. ಆದರೆ ಪ್ರತೀಬಾರಿ ಇದೇ ರೀತಿ ಕಮೆಂಟ್ಗಳು ಬರುವುದು ನನಗೆ ಕಿರಿಕಿರಿಯೆನಿಸುತ್ತದೆ. ಇದು ಮುಂದುವರಿದಲ್ಲಿ ನನ್ನ ಬಿಡುವಿನ ಸಮಯ ನಾನು ನನಗೆಯೇ ಮೀಸಲಿಡುತ್ತೇನೆ.
ಧನ್ಯವಾದಗಳು.
– ನಿಮ್ಮ ಅಸೀಮಾ.
key words: Asima Dhola, China, youtuber, Mangalore, annoyed, unnecessary comments,
SUMMARY:
I won’t be posting videos anymore: ‘Asima’ is annoyed with unnecessary comments. Frustrated by some distorted comments, a popular Kannada YouTuber has posted a farewell message stating that she will not be uploading videos anymore.