ಅಷಾಢ ಮಾಸ: ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗಾಗಿ 25 ಸಾವಿರ ಮೈಸೂರು ಪಾಕ್ ತಯಾರಿ

ಮೈಸೂರು,ಜುಲೈ,10,2024 (www.justkannada.in):  ಅಷಾಢ ಮಾಸ ಬಂತೆಂದರೇ ಸಾಕು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ವಾತಾವರಣ, ಈ ನಡುವೆ ಆಷಾಡ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಭಕ್ರಸಾಗರವೇ ಹರಿದು ಬರುತ್ತದೆ. ಹೀಗಾಗಿ ಭಕ್ತಿರಿಗೆ ವಿತರಿಸುವ ಸಲುವಾಗಿ 25 ಸಾವಿರ ಮೈಸೂರು ಪಾಕ್ ತಯಾರಿಸಲಾಗುತ್ತಿದೆ.

ಹೌದು ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ತಯಾರಿ ಮಾಡಲಾಗುತ್ತಿದೆ. ಮೈಸೂರಿನ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಮೈಸೂರು ಪಾಕ್ ತಯಾರಿ ಮಾಡಲಾಗುತ್ತಿದೆ.  19 ನೇ ವರ್ಷದ ಸೇವಾ ಅನ್ನ ಸಂತರ್ಪಣೆಯಲ್ಲಿ ಸೇವಾ ಸಮಿತಿ ತೊಡಗಿದೆ.

ನಾಡಿದ್ದು ಮೊದಲ ಆಷಾಢ ಮಾಸದ ಪ್ರಯುಕ್ತ ನಾಡಿನ ಮೂಲೆ ಮೂಲೆಗಳಿಂದ ಚಾಮುಂಡಿ ಬೆಟ್ಟಕ್ಕೆ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ.  ಚಾಮುಂಡೇಶ್ವರಿ ಸೇವಾ ಸಮಿತಿಯು ಬರುವ ಭಕ್ತಾದಿಗಳಿಗೆ ಉಪಹಾರದ ಜೊತೆ ಸಿಹಿ ವಿತರಣೆ ಮಾಡಲಿದೆ.

ಇದಕ್ಕಾಗಿ ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಸಮಿತಿ ವತಿಯಿಂದ 500 ಕೆ ಜಿ ಕಡ್ಲೆ ಹಿಟ್ಟು,500 ಕೆ ಜಿ ಸಕ್ಕರೆ,ನಂದಿನಿ ತುಪ್ಪ,ಎಣ್ಣೆ ಇನ್ನಿತರ ಸಾಮಾಗ್ರಿಗಳ ಬಳಸಿ ಮೈಸೂರ್ ಪಾಕ್ ತಯಾರು ಮಾಡಲಾಗುತ್ತಿದೆ. ಇಪ್ಪತ್ತಕ್ಕೂ ಹೆಚ್ಚು ಬಾಣಸಿಗರು ಮೈಸೂರು ಪಾಕ್ ತಯಾರಿಯಲ್ಲಿ ಪಾಲ್ಗೊಂಡಿದ್ದು ಕಳೆದ ಮೂರು ದಿನಗಳಿಂದ ಈ ಕಾರ್ಯ ನಡೆಯುತ್ತಿದೆ.

ಈ ಕುರಿತು ಮಾಹಿತಿ ನೀಡಿದ ಸೇವಾ ಸಮತಿ ಮುಖಂಡ ನಾಗೇಶ್, ನಮ್ಮ ಸೇವಾ ಸಂಸ್ಥೆ ವತಿಯಿಂದ ಕಳೆದ 18 ವರ್ಷಗಳಿಂದ ಅನ್ನಸಂತರ್ಪಣೆ ಮಾಡಲಾಗುತ್ತಿದೆ. ಪ್ರತಿ ವರ್ಷ ಮೊದಲ ಆಷಾಢ ಶುಕ್ರವಾರ ಪ್ರಸಾದ ವಿನಿಮಯ ಮಾಡುತ್ತಿದ್ದೇವೆ. ನಮ್ಮ ಸೇವಾ ಸಮಿತಿಯಲ್ಲಿ 130 ಜನ ಇದ್ದೇವೆ. ನಾವೇ ಚಂದ ಹಾಕಿ ಹಣ ಸಂಗ್ರಹಿಸಿ ಪ್ರತಿ ವರ್ಷ ಪ್ರಸಾದ ವಿನಿಯೋಗ ಮಾಡುವ ಕೆಲಸ ಮಾಡುತ್ತಾ ಬಂದಿದ್ದೇವೆ. ತಾಯಿ ಚಾಮುಂಡೇಶ್ವರಿ ಮತ್ತಷ್ಟು ಶಕ್ತಿ ಕೊಟ್ಟರೆ ಆಷಾಢ ಮಾಸ ಮುಗಿಯುವ ವರೆಗೂ ಸೇವೆ ಮಾಡುವ ಹಂಬಲವಿದೆ ಎಂದು ತಿಳಿಸಿದ್ದಾರೆ.

Key words: Ashadha, Mysore Pak, preparation, Chamundi hill