ಮಹಿಷಾ ದಸರಾ ಮುಗಿಯುವವರೆಗೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ- ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹ.

ಮೈಸೂರು,ಅಕ್ಟೋಬರ್,7,2023(www.justkannada.in): ಮಹಿಷಾ ದಸರಾ ಮುಗಿಯುವವರೆಗೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ ಎಂದು ಮಾಜಿ ಮೇಯರ್ ಪುರುಷೋತ್ತಮ್ ಆಗ್ರಹಿಸಿದರು.

ಮಹಿಷಾ ದಸರಾ ಆಚರಣೆ ಸಂಬಂಧ ಮಹಿಷಾ ದಸರಾ ಆಚರಣೆ ಸಮಿತಿಯಿಂದ  ಇಂದು ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಅಕ್ಟೋಬರ್ 13 ರಂದು ಮಹಿಷಾ ದಸರಾವನ್ನ ಆಚರಣೆ ಮಾಡುತ್ತಿದ್ದೇವೆ. ಅಂದು ಅಶೋಕ್ ಪುರಂ ಉದ್ಯಾನವನದಿಂದ ಸಾವಿರಕ್ಕೂ ಹೆಚ್ಚು ಬೈಕ್ ರ್ಯಾಲಿ ಹೊರಡಲಿದೆ. ಚಾಮುಂಡಿ ಬೆಟ್ಟದ ತಪ್ಪಲಿನ‌ ತಾವರೆಕಟ್ಟೆ ಬಳಿ ಎಲ್ಲ ಒಟ್ಟಿಗೆ ಸೇರಿ  ಬೆಳಗ್ಗೆ 8.30ರ ಸಮಯಕ್ಕೆ ಬೆಟ್ಟದಲ್ಲಿರುವ ಮಹಿಷಾಸುರ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಿ ವಾಪಸ್ಸಾಗುತ್ತೇವೆ‌.

ಬಳಿಕ ತಾವರೆಕಟ್ಟೆ ಬಳಿಯಿಂದ ಸಮಾಜದಲ್ಲಿ ಸಮಾನತೆ ಸಾರಿದ ಬುದ್ದ, ಬಸವ, ಅಂಬೇಡ್ಕರ್, ಕುವೆಂಪು, ವಾಲ್ಮೀಕಿ ಸೇರಿದಂತೆ ಇತರೆ ಆದರ್ಶ ಪುರುಷರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಮೆರವಣಿಗೆ ಮಾಡಿಕೊಂಡು ಇದರ ಜೊತೆ ಮಹಿಷಾಸುರರ  ಟ್ಯಾಬ್ಲೋ ಜೊತೆ ವಿವಿಧ ಕಲಾ ತಂಡಗಳ ಜೊತೆ ತಾವರೆ ಕಟ್ಟೆಯಿಂದ ಟೌನ್ ಹಾಲ್ ವರೆಗೂ ಮೆರವಣಿಗೆ ಸಾಗಲಿದೆ. ಬಳಿಕ ಟೌನ್ ಹಾಲ್ ನಲ್ಲಿ 11 ಗಂಟೆ ಸುಮಾರಿಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು  ಬಿ.ಟಿ ಲಲಿತಾ ನಾಯಕ್ ಅವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು10 ಸಾವಿರಕ್ಕೂ ಹೆಚ್ಚು ಜನ‌ ಬರುವ ನಿರೀಕ್ಷೆ ಇದೆ. ಅಲ್ಲಿ ಸತ್ಯ ಸಂಗತಿ ತಿಳಿಸುವ ಪ್ರಯತ್ನವನ್ನು ಮಾಡುತ್ತೇವೆ. ನಮ್ಮ‌ನಂಬಿಕೆ ನಾವು ಮಾಡುತ್ತೇವೆ ಇದರಿಂದ ಬೇರೆಯವರಿಗೆ ಯಾವುದೇ ತೊಂದರೆ ಇಲ್ಲ. 1973 ರಲ್ಲಿ ಮಹಿಷಾ ದಸರಾವನ್ನು ಅಂದು ವಿಚಾರವಾದಿ ದಿ.ಮಂಟೇಲಿಂಗಯ್ಯನವರು ಆರಂಭಿಸಿದರು. ತದ ನಂತರ ನಾವು 2015 ಈಚೆಗೆ ನಾವು ವಿನೂತನವಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಬೇಕಾಗಿದೆ ಎಂದು ಪುರುಷೋತ್ತಮ್ ತಿಳಿಸಿದರು.

ಮಹಿಷಾ ದಸರಾ ಮುಗಿಯುವವರಗೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ. ಇವರು ಸಂಘರ್ಷಕ್ಕೂ ಸಿದ್ದ ಎಂಬ ಪದ  ಬಳಸಿದ್ದಾರೆ. ಅವರನ್ನ ಯಾರು ಸಂಘರ್ಷಕ್ಕೆ ಕರೆದಿದ್ದಾರೋ ಅವರೊಟ್ಟಿಗೆ ಸಂಘರ್ಷ ಮಾಡಲಿ. ಅವರ ಹೇಳಿಕೆ ನೋಡುತ್ತಾ ಕುಳಿತಿರುವ ಪೋಲಿಸರು ಮತ್ತು ಜಿಲ್ಲಾಡಳಿತ ಈಗಾಗಲೇ ಅವರನ್ನು ಬಂಧಿಸಬೇಕಿತ್ತು. ಹೀಗಾಗಿ ನಮ್ಮ ಸಮಿತಿವತಿಯಿಂದ ಅವರನ್ನು ಬಂಧಿಸಬೇಕೆಂದು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ತಮ್ಮ ರಾಜಕೀಯಕ್ಕಾಗಿ ಚಾಮುಂಡಿ ಚಲೋ ಎಂದು ಕರೆ ನೀಡಿದ್ದಾರೆ. ನಾವು ಚಾಮುಂಡಿ ವಿರೋಧಿಗಳಲ್ಲ  ಪ್ರತಾಪಸಿಂಹ ಅವರಂತರಹ ಸಂಸದರನ್ನು ನಾನು ಕಂಡಿಲ್ಲ.  ವೈಯುಕ್ತಿಕ ದ್ವೇಷಕ್ಕಿಳಿಯುವುದು ನಮ್ಮ ಮನಸ್ಥಿತಿಯಲ್ಲ. ಹೀಗಾಗಿ ನಾವು ಯಾವ ಸಂಘರ್ಷಕ್ಕೂ ಇಳಿಯದೇ ಕಾರ್ಯಕ್ರಮ ಮಾಡುತ್ತೇವೆ. ನಾವು ಬೇರೊಬ್ಬರ ಭಾವನೆಗೆ ಧಕ್ಕೆ ತರುವ ಪ್ರಯತ್ನ ಮಾಡುವುದಿಲ್ಲ  ಅವರ ಪಾಡಿಗೆ ಅವರು ಪ್ರತಿಭಟನಾ ಮಾಡಿದರೆ ಮಾಡಿಕೊಳ್ಳಲಿ ನಾವು ನಮ್ಮ ಪಾಡಿಗೆ ನಾವು ನಮ್ಮ‌ ಕಾರ್ಯಕ್ರಮ ಮಾಡುತ್ತೇವೆ ಎಂದು ಮಾಜಿ ಮೇಯರ್ ಪುರುಷೋತ್ತಮ ಹೇಳಿದರು.

Key words: Arrest -MP Pratap Simha -till -Mahisha Dasara – Former Mayor- Purushottam