ಮೈಸೂರಿನ ಸಿಎಂ ಮನೆ ಮುಂದೆ ಧರಣಿಗೆ ಯತ್ನಿಸಿದ ರೈತರ ಬಂಧನ.

ಮೈಸೂರು,ನವೆಂಬರ್,9,2023(www.justkannada.in): ಕಬ್ಬಿಗೆ ಹೆಚ್ಚುವರಿ ದರ ನಿಗದಿ ,ಕಳೆದ ವರ್ಷದ ಬಾಕಿ ಹಣ  ಬಿಡುಗಡೆಗೆ ಒತ್ತಾಯಿಸಿ ಮೈಸೂರಿನಲ್ಲಿ  ಸಿಎಂ ನಿವಾಸದ ಮುಂದೆ ಧರಣಿ ನಡೆಸಲು ಯತ್ನಿಸಿದ ನೂರಾರು ರೈತರನ್ನ ಪೊಲೀಸರು ಬಂಧಿಸಿದರು.

ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮೈಸೂರಿನಲ್ಲಿ ಸಿಎಂ ನಿವಾಸದ ಮುಂದೆ ನೂರಾರು ರೈತರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ರೈತ ಮುಖಂಡರನ್ನ ಬಂಧಿಸಿದ್ದು ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು.

ಈ ವೇಳೆ ಕುರುಬೂರು ಶಾಂತಕುಮಾರ್ ಮಾತನಾಡಿ,  ಸರ್ಕಾರದಲ್ಲಿರುವ ಜನಪ್ರತಿನಿಧಿಗಳು ದನ ಕಾಯುವ ಆಡಳಿತ ಮಾಡುತ್ತಿದ್ದಾರೆ, ರೈತರ ಮೂಗಿಗೆ ತುಪ್ಪ ಸವರುವ ನಾಟಕ ಮಾಡುತ್ತಿದ್ದಾರೆ.  ಕ್ಷೇತ್ರದ ಮತದಾರರ ವ್ಯಾಪ್ತಿಯಲ್ಲಿರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಅವರಿಂದ ನ್ಯಾಯ ಕೂಡಿಸಲು ಸಾಧ್ಯವಾಗದ ಮುಖ್ಯಮಂತ್ರಿ ರಾಜ್ಯದ ಕಬ್ಬು ಬೆಳೆಗಾರರಿಗೆ ಹೇಗೆ ನ್ಯಾಯ ಕೊಡಿಸುತ್ತಾರೆ ಎಂದು ಪ್ರಶ್ನಿಸಿದರು.

ಕಬ್ಬಿಗೆ ಹೆಚ್ಚುವರಿ ದರ ನಿಗದಿ ,ಕಳೆದ ವರ್ಷದ ಬಾಕಿ ಹಣ  ಬಿಡುಗಡೆಗೆ ಆಗ್ರಹಿಸಿ ಧರಣಿ  ನಡೆಸಲು ಪ್ರಯತ್ನಿಸಿದರೆ ಪೊಲೀಸ್ ಬಲದ ಮೂಲಕ ಹತ್ತಿಕುವ ಕಾರ್ಯ ನಡೆಸುತ್ತಿದ್ದಾರೆ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ಇವರಿಗೆ ನೈತಿಕತೆ ಇಲ್ಲದಂತಾಗಿದೆ ಎಂದು ಕುರುಬೂರು ಶಾಂತಕುಮಾರ್ ಕಿಡಿಕಾರಿದರು.

,ಬರಗಾಲದಿಂದ ನರಳುತ್ತಿರುವ ರೈತರಿಗೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಮತ್ತೊಂದು ಮರ್ಮಾಘಾತ, ರೈತರಿಗೆ ಮಾತ್ರ ಬರಗಾಲ, ಮಳೆ ಕಡಿಮೆ ವಿದ್ಯುತ್ ಉತ್ಪಾದನೆ ಕುಂಠಿತ ಕಾರಣ ಹೇಳಿ  5 ಗಂಟೆ ವಿದ್ಯುತ್ ನೀಡುತ್ತೇವೆ ಎಂದು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಇದೇ ಸರ್ಕಾರ ಕೈಗಾರಿಕೆಗಳಿಗೆ ಉದ್ಯಮಿಗಳಿಗೆ ಸಮರ್ಪಕ 24 ಗಂಟೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎನ್ನುತ್ತಾರೆ ಸರ್ಕಾರದ ಇಬ್ಬಗೆ ನೀತಿ ಸರಿಯಲ್ಲ, ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಇದು ಯಾವ ನ್ಯಾಯ..? ಎಂದು ಕುರುಬೂರು ಶಾಂತಕುಮಾರ್ ಪ್ರಶ್ನಿಸಿದರು.

ಸರ್ಕಾರ ಎಚ್ಚೆತ್ತುಕೊಂಡು ಹಗಲು ಹೊತ್ತಿನಲ್ಲಿ 10 ಗಂಟೆಗಳ ವಿದ್ಯುತ್ ನೀಡಬೇಕು ರೈತರು ಈಗಾಗಲೇ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ ಮತ್ತಷ್ಟು ರೈತರು ಬೀದಿಪಾಲಾಗುತ್ತಾರೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ಜಿಲ್ಲಾ ಕಾರ್ಯದರ್ಶಿ ಬರಡನಫುರ ನಾಗರಾಜ್, ಕಾರ್ಯಾಧ್ಯಕ್ಷ ಹಳಿಕರೆಹುಂಡಿ ಬಾಗ್ಯರಾಜ್, ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್, ಜಿಲ್ಲಾ ಮಹಿಳಾಧ್ಯಕ್ಷ ಕಮಲಮ್ಮ ಜಿಲ್ಲಾ ಉಪಾಧ್ಯಕ್ಷ ರಾಜಣ್ಣ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಅಧ್ಯಕ್ಷ   ಹಾಡ್ಯರವಿ ಸೇರಿ ಮುಂತಾದವರು ಪಾಲ್ಗೊಂಡಿದ್ದರು.

Key words: Arrest – farmers –protest-in front of -CM’s house – Mysore.