ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಹರಿಸುವಂತೆ CWMA ಆದೇಶ.

ನವದೆಹಲಿ,ಸೆಪ್ಟಂಬರ್,29,2023(www.justkannada.in):  ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು ಜಲಾಶಯಗಳಲ್ಲಿ ನೀರಿಲ್ಲದೇ ಕುಡಿಯುವ ನೀರಿಗೂ ಸಂಕಷ್ಟಪಡುವ ಪರಿಸ್ಥಿತಿ ಇದೆ. ಹೀಗಿದ್ದರೂ ಸಹ ತಮಿಳುನಾಡಿಗೆ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೆ ಆದೇಶ ಹೊರಡಿಸಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿ ಕಳೆದ ಸಭೆಯಲ್ಲಿ ಪ್ರತಿ ನಿತ್ಯ 3 ಸಾವಿರ ಕ್ಯೂಸೆಕ್ ನಂತೆ ಅಕ್ಟೋಬರ್ 15ರವರೆಗೆ ತಮಿಳುನಾಡಿಗೆ ನೀರು ಹರಿಸಿ ಎಂದು ಕರ್ನಾಟಕಕ್ಕೆ ಸೂಚನೆ ನೀಡಿತ್ತು.ಆದರೆ ಈ ಆದೇಶಕ್ಕೆ ಕರ್ನಾಟಕ ಮತ್ತು ತಮಿಳುನಾಡು ಎರಡು ರಾಜ್ಯಗಳು ಒಪ್ಪಲಿಲ್ಲ. ಹೀಗಾಗಿ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆದಿದ್ದು ಇದೀಗ ಸಮಿತಿಯ ಆದೇಶದಂತೆಯೇ ತಮಿಳುನಾಡಿಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನಂತೆ ಅಕ್ಟೋಬರ್ 15ರವರೆಗೆ ನೀರು ಹರಿಸಿ ಎಂದು ಮತ್ತೆ ಸೂಚಿಸಿದೆ.

ಪ್ರತಿನಿತ್ಯ 12,500 ಕ್ಯೂಸೆಕ್ ನೀರು ಹರಿಸಲು ಸೂಚಿಸುವಂತೆ ಸಭೆಯಲ್ಲಿ ತಮಿಳುನಾಡು ಬೇಡಿಕೆ ಇಟ್ಟಿತ್ತು. ಇನ್ನು ಕರ್ನಾಟಕ ಕುಡಿಯುವ ನೀರನ್ನಾದರೂ ಉಳಿಸಿಕೊಳ್ಳುವ ಸಲುವಾಗಿ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂದು ವಾದ ಮಂಡಿಸಿತ್ತು.

ಇತ್ತ ಕಾವೇರಿ ನೀರಿಗಾಗಿ ಇಂದು ಅಖಂಡ ಕರ್ನಾಟಕ ಬಂದ್ ಮಾಡಲಾಗಿದ್ದು ವಿವಿಧ ಕನ್ನಡಪರ ಸಂಘಟನೆಗಳು ರೈತಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಕಾವೇರಿ ಹೋರಾಟಕ್ಕೆ ಸ್ಯಾಂಡಲ್ ವುಡ್ ಸಹ ಸಾಥ್ ನೀಡಿದೆ.

Key words:  Another shock –Karnataka- CWMA -order – release -water – Tamil Nadu.