ರಾಜ್ಯದ 8 ಜಿಲ್ಲೆಗಳ ಅಂಗನವಾಡಿ ಸಮಯ ಬದಲಾವಣೆ.

ಬೆಂಗಳೂರು, ಏಪ್ರಿಲ್,2,2024 (www.justkannada.in):   ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ 8 ಜಿಲ್ಲಗಳ ಅಂಗನವಾಡಿಗಳ ಸಮಯವನ್ನ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೇಸಿಗೆಯ ಬಿರು ಬಿಸಿಲಿನಿಂದ ಅಂಗನವಾಡಿಗೆ ಹೋಗುತ್ತಿದ್ದ ಪುಟ್ಟ ಮಕ್ಕಳು ನಲಗುತ್ತಿದ್ದ ಹಿನ್ನೆಲೆ ಇದನ್ನು ಅರಿತ ಸರ್ಕಾರ ಇದೀಗ ಅಂಗನವಾಡಿಗಳ ಸಮಯವನ್ನು ಎರಡು ತಿಂಗಳ ಕಾಲ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಏಪ್ರಿಲ್ ಮತ್ತು ಮೇ ತಿಂಗಳಿಗೆ ಅನ್ವಯವಾಗುವಂತೆ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್ ಮತ್ತು ಕಿತ್ತೂರು ಕರ್ನಾಟಕ ಭಾಗದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ಸಮಯವನ್ನ ಬದಲಾವಣೆ ಮಾಡಲಾಗಿದೆ.

ಮುಂದಿನ ಎರಡು ತಿಂಗಳ ಕಾಲ ಈ ಎಂಟು ಜಿಲ್ಲೆಯಲ್ಲಿನ ಅಂಗನವಾಡಿಗಳು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. ಬದಲಾದ ವೇಳಾಪಟ್ಟಿಯಂತೆ ಐಸಿಡಿಎಸ್ ಸೇವೆಗಳನ್ನು ನಿಯಮಾನುಸಾರ ಯಾವುದೇ ಅಡೆತಡೆಗಳಿಲ್ಲದೆ ಅಂಗನವಾಡಿ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್ ಅವರು ತಿಳಿಸಿದ್ದಾರೆ.

Key words: Anganwadi, timing, change