ಮೈಸೂರು,ಆಕ್ಟೋಬರ್,31,2025 (www.justkannada.in): ಹುಟ್ಟಿನಿಂದ ಸಾಯುವವರೆಗೂ ಎಲ್ಲರಿಗೂ ಕಾನೂನು ಅನ್ವಯವಾಗುತ್ತದೆ. ಇಂತಹ ಶಿಕ್ಷಣವನ್ನು ಎಲ್ಲರೂ ಪಡೆಯಬೇಕು. ನಿರಂತರ ಕಲಿಕೆ ಮತ್ತು ಆಸಕ್ತಿಯಿಂದ ಸಮಾಜದಲ್ಲಿ ಉತ್ತಮ ವಕೀಲರಾಗಲು ಸಾಧ್ಯ ಎಂದು ಕನ್ನಡ ಪ್ರಭ ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್ ತಿಳಿಸಿದರು.
ನಗರದ ದಟ್ಟಗಳ್ಳಿಯಲ್ಲಿ ಇರುವ ಚಂಪಾ ಸ್ಕೂಲ್ ಆಪ್ ಲಾ ಕಾಲೇಜಿನಲ್ಲಿ ನಡೆದ ಹೊಸ ವಿದ್ಯಾರ್ಥಿಗಳ ಸ್ವಾಗತ, ವಿವಿಧ ವೇದಿಕೆಗಳ ಉದ್ಘಾಟನಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಮಹಾನ್ ಜ್ಞಾನಿ ಅಂಬೇಡ್ಕರ್. ಕಾನೂನು ವಿದ್ಯಾರ್ಥಿಗಳು ಅವರ ಸ್ಮರಣೆ, ಚಿಂತನೆಗಳ ಅಧ್ಯಯನ ಮಾಡಲೇಬೇಕು. ಈ ಬಾರಿಯ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದಾಗ ಕೆಲವರು ಆಕ್ಷೇಪ ತೆಗೆದರು. ಈ ಗೊಂದಲಕ್ಕೆ ಪರಿಹಾರ ಸಿಕ್ಕಿದ್ದು ನಮ್ಮ ನ್ಯಾಯಾಂಗ ವ್ಯವಸ್ಥೆಯಿಂದ. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಸಮಾಜದಲ್ಲಿ ನಡೆಯುವ ಘಟನೆಗಳು, ಕೇಸ್ ಸ್ಟಡಿಗಳನ್ನು ನಿರಂತರವಾಗಿ ಮಾಡಬೇಕು. ಕೋರ್ಟ್‌ಗಳಿಗೆ ಭೇಟಿ ಕೊಟ್ಟು, ಈಗಿನಿಂದಲೇ ವಾದ-ಪ್ರತಿವಾದಗಳನ್ನು ಆಲಿಸಬೇಕು. ಸೀನಿಯರ್ ಗಳ ಜೊತೆಗೆ ನಿರಂತರ ಒಡನಾಟ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾದ ಡಾ. ಸಿ. ಬಸವರಾಜು ಅವರು ಮಾತನಾಡಿ, ಶಿಕ್ಷಣ ಇಲ್ಲದೇ ನಾವು ನಾಗರೀಕ ಸಮಾಜವನ್ನು ಕಟ್ಟುವುದಕ್ಕೆ ಸಾಧ್ಯವೇ ಇಲ್ಲ.
ಸಮಾಜದಲ್ಲಿ ಇರುವ ಎಲ್ಲ ಸಮಸ್ಯೆಗಳಿಗೂ ಪರಿಹಾರ ಶಿಕ್ಷಣದಲ್ಲಿ ಇದೆ. ರಾಷ್ಟ್ರದ ಎಲ್ಲ ಪ್ರಜೆಗಳಿಗೆ, ಕ್ಷೇತ್ರಗಳಿಗೆ ಬುನಾದಿ ಹಾಕಿರುವುದು ನಮ್ಮ ಕಾನೂನು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ, ಪತ್ರಿಕಾರಂಗ ಯಶಸ್ವಿಯಾಗಿ ನಡೆಯಲು ಕಾನೂನು ಬೇಕೇ ಬೇಕು. ಇಂದಿಗೂ ಲಕ್ಷಾಂತರ ಮಂದಿ ನೆಲದ ಕಾನೂನಿನ ಅರಿವಿಲ್ಲದೇ ಅಂಧಕಾರದಲ್ಲಿ ಇದ್ದಾರೆ. ಅವರಿಗೆ ಕಾನೂನಿನ ಶಿಕ್ಷಣದ ಮೂಲಕ ಬೆಳಕು ನೀಡಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಬೇಕು.
ರಾಜ್ಯದಲ್ಲಿ ಇಂದು 47,000 ವಿದ್ಯಾರ್ಥಿಗಳು ಕಾನೂನು ಶಿಕ್ಷಣ ಪಡೆಯುತ್ತಿದ್ದಾರೆ. ಇವರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರವೇ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ತಡೆ ಬೀಳಲಿದೆ.
ನಾವು ಹಕ್ಕುಗಳ ಬಗ್ಗೆ ಮಾತನಾಡುವ ಜೊತೆಗೆ ನಮ್ಮ ಕರ್ತವ್ಯಗಳ ಬಗ್ಗೆಯೂ ಮಾತನಾಡಬೇಕಿದೆ. ಕರ್ತವ್ಯಕ್ಕೆ ಪ್ರಾಮುಖ್ಯತೆ ಕೊಟ್ಟಾಗ ಹಕ್ಕುಗಳ ಉಲ್ಲಂಘನೆ ಕಡಿಮೆ ಆಗುತ್ತದೆ. ಈಗ ನ್ಯಾಯಾಧೀಶರು, ವಕೀಲರ ಮೇಲೂ ಆರೋಪಗಳು ಕೇಳಿ ಬರುತ್ತಿವೆ. ಹೀಗಾಗಿ ಪ್ರಸ್ತುತ ಕಾನೂನು ಅರಿವು ಮೂಡಿಸಬೇಕಾದ ತುರ್ತು ಇದೆ. ನಾವು ಅಂಬೇಡ್ಕರ್ ಕೊಟ್ಟಿರುವ ಶ್ರೇಷ್ಠ ಸಂವಿಧಾನವನ್ನು ಹೊಂದಿದ್ದು, ಇದರ ಪ್ರಸ್ತಾವನೆಯ ಅಂಶಗಳನ್ನು ಅನುಸರಿಸಿದರೆ ಸಾಕು ಸುಸಂಸ್ಕೃತ ರಾಷ್ಟ್ರ ಕಟ್ಟಲು ಸಾಧ್ಯವಾಗುತ್ತದೆ. ಇಂದಿಗೂ ಕೆಲವು ಕಡೆ ಸಾಮಾಜಿಕ ನ್ಯಾಯ ಮರೀಚಿಕೆ ಆಗಿದೆ. ಬಡತನ, ಅತ್ಯಾಚಾರ, ಜಾತೀಯತೆ, ಮಾನವ ಹಕ್ಕುಗಳ ಉಲ್ಲಂಘನೆಯಂತಹ ಕುಕೃತ್ಯಗಳು ನಡೆಯುತ್ತಲೇ ಇವೆ. ಸಂವಿಧಾನ ಬಂದು 76 ವರ್ಷ ಆಗಿದ್ದರೂ ಸಾಮಾನ್ಯ ಜನರು ಪೊಲೀಸ್ ಠಾಣೆಗೆ ಬರಲು ಹೆದರುತ್ತಿದ್ದಾರೆ. ಇದು ಇಲ್ಲವಾಗಬೇಕು, ಎಲ್ಲರಿಗೂ ಕಾನೂನಿನ ಅರಿವು ಬರಬೇಕು. ಈ ನಿಟ್ಟಿನಲ್ಲಿ ಕಾನೂನು ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಚಂಪಾ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷರಾದ ಮಹಾಲಕ್ಷ್ಮೀ ಅವರು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಯಾವುದೇ ರೀತಿಯ ಸೌಲಭ್ಯಗಳು ಬೇಕಿದ್ದರೂ ನಾವು ಒದಗಿಸಲು ಸಿದ್ಧರಿದ್ದೇವೆ. ನಮ್ಮ ಕಾಲೇಜಿನಿಂದ ಕಲಿತ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸ ಮಾಡಿದರೆ ಅದೇ ನಮಗೆ ಸಂತೋಷ ಎಂದು ಅಭಿಪ್ರಾಯಪಟ್ಟರು.
ಪ್ರಾಂಶುಪಾಲರಾದ ಆಸ್ಮಾತುನ್ನಿಶಾ ಎಲ್ಲರನ್ನೂ ಸ್ವಾಗತಿಸಿ, ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಹಂಸವೇಣಿ, ಉಪನ್ಯಾಸಕರಾದ ಭರತ್ ರಾಜ್, ವಿದ್ಯಾರ್ಥಿಗಳು ಹಾಜರಿದ್ದರು.
Key words: learning, interest, good lawyer, Amshi Prasannakumar
 
            
