ಅಮಿತ್ ಶಾ ರಾಜ್ಯಕ್ಕೆ ಏಕೆ ಬರುತ್ತಿದ್ದಾರೆ..? ಮತ್ತೆ ಹೆಣ ಬೀಳಿಸಲು ಬರ್ತಿದ್ದಾರಾ..? ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ.

ರಾಮನಗರ,ಆಗಸ್ಟ್,2,2022(www.justkannada.in):  ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುರೆಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಪ್ರವಾಸ ಕುರಿತು ಕಿಡಿಕಾರಿದ್ದಾರೆ.

ರಾಮನಗರದಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಅಮಿತ್ ಶಾ ರಾಜ್ಯ ಪ್ರವಾಸಕ್ಕೆ ಯಾಕೆ ಬರುತ್ತಿದ್ದಾರೆ…? ಮತ್ತೆ ಹೆಣ ಬೀಳಿಸಲು ಬರುತ್ತಿದ್ದಾರಾ..? ನರ ಬಲಿ ಮುಂದುವರೆಸಿ ಎಂದು ಹೇಳಲು ಬರುತ್ತಿದ್ದಾರಾ..? ನರಬಲಿ ಮೂಲಕವೇ ಬಿಜೆಪಿ ಅಧಿಕಾರ ಹಿಡಿಯುತ್ತಿದೆ.  ಬಿಜೆಪಿಗರು ಅಧಿಕಾರದ ಮದದಲ್ಲಿ ಇದ್ದಾರೆ ಎಂದು  ಹರಿಹಾಯ್ದರು.

ಸಂಸದ ಪ್ರತಾಪ್ ಸಿಂಹ ಕ್ರೆಡಿಟ್ ವಿಚಾರಕ್ಕೆ ಟಾಂಗ್ ನೀಡಿದ ಹೆಚ್.ಡಿ ಕುಮಾರಸ್ವಾಮಿ, ಮೈಸೂರು-ಬೆಂಗಳೂರು ದಶಪಥ ರಸ್ತೆ ಕಾಮಗಾರಿ ಸರಿಯಾದ ಗುಣಮಟ್ಟವಿಲ್ಲ. ರಾಜ್ಯದಲ್ಲಿ ಯಾರ್ಯಾರ ಕೊಡುಗೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ.  ನನ್ನ ಸಾಧನೆ ಬಗ್ಗೆ ವಿಧಾನಸೌಧಧಲ್ಲಿ ರೆಕಾರ್ಡ್ ಹೇಳುತ್ತೆ. ಯಾರದ್ದೋ ಸರ್ಕಾರದಲ್ಲಿ ಆಗಿದ್ದ ಕೆಲಸಕ್ಕೆ ಬಿಜೆಪಿ ಟೇಪ್ ಕತ್ತರಿಸಿ  ಬಿಲ್ಡಪ್ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ಕುರಿತು ಸಭೆ ನಡೆಸಿದ್ದೇನೆ. ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು.  ಈಗಲೂ ಯೋಜನೆ ಟೇಕಾಫ್ ಆಗಿಲ್ಲ. ಪ್ರತಾಪ್ ಸಿಂಹ ಬರೀ ಪೋಟೊ ಗೆ ಸೀಮಿತವಷ್ಟೆ. ಇಲ್ಲಿ ಬಂದು ಫೋಟೊ ತೆಗೆದುಕೊಳ್ಳಲು ಪ್ರತಾಪ್ ಸಿಂಹ ಯಾರು..? ಎಂದು ಪ್ರಶ್ನಿಸಿದರು.

Key words: Amit Shah –state-tour-former CM-HD Kumaraswamy