ಅಮಿತ್ ಶಾ ಅವರೇ ಈ ಮೂರು ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಿಸಿ- ರಣದೀಪ್ ಸಿಂಗ್ ಸುರ್ಜೇವಾಲ ಸವಾಲು.

ಬೆಂಗಳೂರು,ಡಿಸೆಂಬರ್,30,2022(www.justkannada.in):  ರಾಜ್ಯ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡ್ಯದಲ್ಲಿ ನಡೆದ ಬಿಜೆಪಿ ಜನ ಸಂಕಲ್ಪಯಾತ್ರೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಅಮಿತ್ ಶಾಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸವಾಲೊಂದನ್ನ ಹಾಕಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ರಣದೀಪ್‌ ಸಿಂಗ್ ಸುರ್ಜೆವಾಲಾ  ಟ್ವೀಟ್ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮೂರು ಪ್ರಶ್ನೆಗಳನ್ನು ಹಾಕಿದ್ದಾರೆ. ಉತ್ತರ ಕರ್ನಾಟಕ ಭಾಗದ ನೀರಾವರಿಗಾಗಿ 6 ​​ಲಕ್ಷ ಹೆಕ್ಟೇರ್‌ ಗಳಿಗೆ 130 ಟಿಎಂಸಿ ಕೃಷ್ಣಾ ನದಿ ನೀರು ಹರಿಸಲು ಬಿಜಾಪುರದ ಇಂದಿನ “ಕೃಷ್ಣಾ ಜನಾಂದೋಲನ” ಸಮಾವೇಶದಲ್ಲಿ ನಿರ್ಣಯ ಕೈಗೊಂಡು ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿಯ ನವ ಶಕೆಯನ್ನು ಆರಂಭಿಸಲಿದ್ದೇವೆ. ಬಿಜೆಪಿ ದ್ರೋಹ ಮಾಡುವ ಕೆಲಸ ಮಾಡಿದರೆ, ಕಾಂಗ್ರೆಸ್ ನಾಡನ್ನು ಕಟ್ಟುವ ಕೆಲಸ ಮಾಡುತ್ತದೆ. ಅಮಿತ್ ಶಾ ಅವರು  ಈ ಮೂರು ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ತೋರಲಿ ಎಂದಿದ್ದಾರೆ.

ಮೊದಲನೆಯದ್ದು ಕೃಷ್ಣಾಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ಏಕೆ ನೀಡಲಿಲ್ಲ? ಎರಡನೇ ಪ್ರಶ್ನೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ನೀವು ಏಕೆ ಪ್ರಾರಂಭಿಸಲಿಲ್ಲ? ಎಂದು ಕೇಳಿದ್ದಾರೆ.

ಹಾಗೆಯೇ ಮೂರನೇಯದಾಗಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಭರವಸೆ ನೀಡಿದ ₹ 1.50 ಲಕ್ಷ ಕೋಟಿಯಲ್ಲಿ ಒಂದೇ ಒಂದು ನಯಾ ಪೈಸೆಯನ್ನು ಸಹ ಏಕೆ ವಿನಿಯೋಗಿಸಲಿಲ್ಲ? ಎಂದು ರಣದೀಪ್ ಸಿಂಗ್ ಸುರ್ಜೆವಾಲ ಪ್ರಶ್ನಿಸಿದ್ದಾರೆ.

Key words: Amit Shah – dares – answer -three questions-Randeep Singh Surjewala- challenge.