ಸಚಿವ ಮಹದೇವಪ್ಪ ಸ್ವಗ್ರಾಮದಲ್ಲೇ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳ ಪ್ರತಿಭಟನೆ.

ಮೈಸೂರು,ಮಾರ್ಚ್,22,2024(www.justkannada.in): ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರ ಸ್ವಗ್ರಾಮದಲ್ಲಿರುವ ಅಂಬೇಡ್ಕರ್ ವಸತಿ ಶಾಲೆ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.

ನಂಜನಗೂಡು ತಾಲ್ಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಹದಿನಾರು ಗ್ರಾಮದಲ್ಲಿ ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಮಗೆ ಸರ್ಕಾರ ನೀಡುತ್ತಿರುವ ಸೌಲಭ್ಯ ಕಲ್ಪಿಸಿ ಎಂದು ವಿದ್ಯಾರ್ಥಿಗಳು  ಒತ್ತಾಯಿಸಿ  ಪ್ರತಿಭಟನೆ ನಡೆಸಿದರು.  ವಸತಿ ಶಾಲೆ ತೊರೆದು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ  ಧರಣಿ ನಡೆಸಿದ್ದು,   ನಾವು ಯಾವುದೇ ಕಾರಣಕ್ಕೂ ಅಂಬೇಡ್ಕರ್ ವಸತಿ ಶಾಲೆಯ ಒಳಗೆ ಪ್ರವೇಶ ಮಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸತಿ ಶಾಲೆ 2017ರಲ್ಲಿ ಪ್ರಾರಂಭವಾಗಿ ಇದುವರೆಗೂ ಸ್ವಂತ ಕೊಠಡಿ  ಹೊಂದದೆ ಬಾಡಿಗೆ ಕೊಠಡಿಯಲ್ಲಿ ನಡೆಯುತ್ತಿದೆ.  ಶಾಲೆಯಲ್ಲಿ ಮೂಲಭೂತ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು  ಪರದಾಟ ನಡೆಸುತ್ತಿದ್ದು, ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆ ಇಲ್ಲದೆ ಕೊಠಡಿಗಳಿಲ್ಲದ ದುಸ್ಥಿತಿಗೆ ತಲುಪಿದೆ. ವಿದ್ಯಾರ್ಥಿಗಳಿಗೆ ಸಂಪಿನಲ್ಲಿ ಕೊಳೆತ ನೀರನ್ನೇ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ.

ಇದುವರೆಗೂ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಅನುಕೂಲ ಕಲ್ಪಿಸಿಕೊಟ್ಟಿಲ್ಲ. ಸರ್ಕಾರದಿಂದ ಬರುತ್ತಿರುವ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಪ್ರಾಂಶುಪಾಲರು, ಆಡಳಿತದ ವಿರುದ್ಧ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿರುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಹದಿನಾರು ಗ್ರಾಮ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಹೆಚ್.ಸಿ ಮಹದೇವಪ್ಪರ ಸ್ವಗ್ರಾಮವಾಗಿದೆ.  ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಜೊತೆ ಸಾಮೂಹಿಕವಾಗಿ ಹದಿನಾರು ಗ್ರಾಮಸ್ಥರು ಭಾಗವಹಿಸಿದ್ದರು.

Key words: Ambedkar- Residential -School –students- protest -mysore