ರಾಜ್ಯಕ್ಕೆ ಇಂದು 15,520 ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ  – ಕೇಂದ್ರ ಸಚಿವ ಸದಾನಂದ ಗೌಡ

ನವದೆಹಲಿ, ಜೂನ್ 9 ,2021(www.justkannada.in): ಎರಡು ದಿನಗಳ ಮುಂಚೆ ರಾಜ್ಯಕ್ಕೆ 9750 ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿದ್ದ ಕೇಂದ್ರವು ಇಂದು 15,520 ವಯಲ್ಸ್ ಒದಗಿಸಿದೆ. ಇದರೊಂದಿಗೆ ರಾಜ್ಯಕ್ಕೆ ಇದುವರೆಗೆ 40,470 ವಯಲ್ಸ್ ಎಂಫೊಟೆರಿಸಿನ್-ಬಿ ಒದಗಿಸಿದಂತಾಗಿದೆ. ಕಪ್ಪುಶಿಲೀಂದ್ರ ರೋಗದ ಚಿಕಿತ್ಸೆಗೆ ಈ ಔಷಧವನ್ನು ಬಳಸಲಾಗುತ್ತದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ತಿಳಿಸಿದರು.jk

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಡಿ ವಿ ಸದಾನಂದಗೌಡ ಅವರು, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಹೊಸದಾಗಿ 1.7 ಲಕ್ಷ ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಲಾಗಿದೆ ಎಂದರು.

ಜೂನ್ ತಿಂಗಳು ಆರಂಭದಿಂದ ಇಂದಿನವರೆಗೆ ಕೇಂದ್ರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 3.21 ಲಕ್ಷ  ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಿದೆ.  ಆಮದು ಹೆಚ್ಚಿಸಲಾಗುತ್ತಿದೆ. ಸ್ವದೇಶಿಯವಾಗಿಯೂ ಈ ಔಷಧದ ಉತ್ಪಾದನೆ ಹೆಚ್ಚಾಗುತ್ತಿದೆ. ಇದರ ಲಭ್ಯತೆ ದೊರೆತಂತೆಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಇದರ ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಉಂಟಾಗುವ ಭರವಸೆ ಇದೆ ಎಂದು ಫಾರ್ಮಾ ಸಚಿವರೂ ಆಗಿರುವ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ರಾಮಗುಂಡಂ ಯೂರಿಯಾ ಕಾರ್ಖಾನೆ:

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು –  ರಸಗೊಬ್ಬರ ಉತ್ಪಾದನೆಗೆ ಸಂಬಂಧಿಸಿದ  ಹೊಸ ಹೂಡಿಕೆ ನೀತಿಯ ಲಾಭವನ್ನು (ಸಹಾಯ ಧನ, ಪ್ರೊತ್ಸಾಹ ಧನ, ಸಬ್ಸಿಡಿ ಇತ್ಯಾದಿ) ರಾಮಗುಂಡಂ ರಸಗೊಬ್ಬರ ಮತ್ತು ರಾಸಾಯನಿಕ ಲಿಮಿಟೆಡ್ (RFCL) ಯೂರಿಯಾ ಕಾರ್ಖಾನೆಗೂ ವಿಸ್ತರಿಸಲು ಒಪ್ಪಿಗೆ ನೀಡಿದೆ ಎಂದು ಸದಾನಂದ ಗೌಡ ತಿಳಿಸಿದರು.

ವಿವಿಧ ಕಾರಣಗಳಿಂದ ಮುಚ್ಚಿದ್ದ ಐದು ಯೂರಿಯಾ ಘಟಕಗಳನ್ನು ನಮ್ಮ ರಸಗೊಬ್ಬರ ಇಲಾಖೆಯು ಪುನಶ್ಚೇತನಗೊಳಿಸುತ್ತಿದೆ. ಈಗಾಗಲೇ ರಾಮಗುಂಡಂ ಸ್ಥಾವರ ಉತ್ಪಾದನೆ ಆರಂಭಿಸಿದೆ. ಗೋರಖ್ಪುರ ಸ್ಥಾವರ ಜುಲೈ ತಿಂಗಳಲ್ಲಿ ಉತ್ಪಾದನೆ ಆರಂಭಿಸಲಿದೆ. ಸಿಂಧ್ರಿ ಹಾಗೂ ಬರೌಣಿ ಘಟಕಗಳು ಈ ವರ್ಷದ ಡಿಸೆಂಬರ್’ನಲ್ಲಿ ಕಾರ್ಯಾರಂಭ ಮಾಡಲಿವೆ. ತಾಲ್ಚೆರ್ ಘಟಕ 2023ರ ಸೆಪ್ಟೆಂಬರ್’ನಲ್ಲಿ ಕಾರ್ಯಾರಂಭ ಮಾಡಲಿದೆ. ಇವೆಲ್ಲ ವಾರ್ಷಿಕವಾಗಿ ತಲಾ 12.7 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನಾ ಸಾಮರ್ಥ್ಯದ ಘಟಕಗಳಾಗಿವೆ (ಒಟ್ಟು ಉತ್ಪಾದನೆ 63.5 ಲಕ್ಷ ಟನ್). ಇಂಧನ ಕ್ಷಮತೆಯನ್ನು ಹೆಚ್ಚಿಸಲು ಅನಿಲ ಆಧಾರಿತ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸಲಾಗಿದೆ. ಭಾರತವು ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಗಳಿಸಬೇಕು ಎಂಬುದು ಮೋದಿಯವರ ಆಶಯ. ಪುನಶ್ಚೇತನಗೊಳ್ಳುತ್ತಿರುವ ಈ  ಘಟಕಗಳು ದೇಶವು ಯೂರಿಯಾ ಸ್ವಾವಲಂಬನೆ ಗಳಿಸುವತ್ತ ಮಹತ್ವದ ಹೆಜ್ಜೆಗಳಾಗಿವೆ ಎಂದು ಸದಾನಂದ ಗೌಡ ವಿವರಿಸಿದರು.

Key words: Allocation – 15,520 Vials- Mphotericin-B-state –today-  Union Minister- Sadananda Gowda.