ಶಿವಲಿಂಗ ಪೂಜೆಗೆ ಯತ್ನ ಹಿನ್ನೆಲೆ ದರ್ಗಾ ಪ್ರವೇಶಿಸದಂತೆ ಮಹಿಳೆಯರಿಂದ ಪ್ರತಿಭಟನೆ: ಕಿಡಿಗೇಡಿಗಳಿಂದ ಮಚ್ಚು ಲಾಂಗು ಪ್ರದರ್ಶನ.

ಕಲ್ಬರ್ಗಿ,ಮಾರ್ಚ್,1,2022(www.justkannada.in):  ಕಲ್ಬರ್ಗಿ ಜಿಲ್ಲೆ ಆಳಂದದಲ್ಲಿನ ಲಾಂಡ್ಲೆ ಮಶಾಕ್ ದರ್ಗಾದ ಒಳಗಿರುವ ಶಿವಲಿಂಗಕ್ಕೆ ಶ್ರೀರಾಮಸೇನೆ ಕಾರ್ಯಕರ್ತರು ಪೂಜೆಗೆ ಮುಂದಾದ ವೇಳೆ ದರ್ಗಾ ಪ್ರವೇಶಿಸದಂತೆ ಮಹಿಳೆಯರು ಪ್ರತಿಭಟನೆ ನಡೆಸಿದ್ದು ಈ ವೇಳೆ ಕೆಲ ಕಿಡಿಗೇಡಿಗಳು ಮಚ್ಚು ಲಾಂಗು ಪ್ರದರ್ಶನ ಮಾಡಿದ್ದಾರೆ.

ಸದ್ಯ ಆಳಂದದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಆಳಂದ ಪಟ್ಟಣದಲ್ಲಿರುವ ಲಾಂಡ್ಲೆ ಮಶಾಕ್ ದರ್ಗಾದ ಒಳಗಿರುವ ರಾಘವ ಶಿವಲಿಂಗಕ್ಕೆ ಶ್ರೀರಾಮಸೇನೆ ಪೂಜೆಗೆ ಮುಂದಾಗಿದೆ. ಈ ಮಧ್ಯೆ ಆಂದೋಲ ಶ್ರೀಗಳ ನೇತೃತ್ವದಲ್ಲಿ ಶಿವಲಿಂಗವನ್ನ ಗಂಗಾಜಲದಿಂದ ಶುದ್ಧಿಕರಣಕ್ಕೆ ಮುಂದಾದರು. ಈ ವೇಳೆ ದರ್ಗಾ ಪ್ರವೇಶಿಸದಂತೆ ಆಗ್ರಹಿಸಿ ನಿಷೇಧಾಜ್ಞೆ ನಡುವೆಯೂ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ. ಈ ಸಮಯದಲ್ಲಿ ಕೆಲ ಕಿಡಿಗೇಡಿಗಳು ಮಚ್ಚು ಲಾಂಗು ಪ್ರದರ್ಶಿಸಿ ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ.

ಗಲಾಟೆ ಹಿನ್ನೆಲೆಯಲ್ಲಿ ಆಳಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಇನ್ನು ಹಿಂದೂಪರ ಕಾರ್ಯಕರ್ತರು ಧರಣಿಗೆ ಮುಂದಾಗಿದ್ದು, ಮೆರವಣಿಗೆಗೆ ಹೊರಟಿದ್ದ ಕೇಂದ್ರ ಸಚಿವ   ಭಗವಂತ ಖೂಬಾ ಮತ್ತು ಶಾಸಕ ಸುಭಾಷ್ ಗುತ್ತೆದಾರ್ ಅವರನ್ನ ಪೊಲೀಸರು ತಡೆದಿದ್ದಾರೆ.  ಇದೇ ವೇಳೆಯಲ್ಲಿ ಆಂದೋಲ ಶ್ರೀಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದು, ದರ್ಗಾ ಒಳಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಆಂದೋಲ ಶ್ರೀಗಳು ಪಟ್ಟು ಹಿಡಿದಿದ್ದು,  ನಮ್ಮ ಪೂಜೆ ಹಕ್ಕು ಕಸಿಯುತ್ತಿದ್ದೀರಿ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Key words: alanda-darga-shivalinga-protest