ಮಂಡ್ಯ,ಡಿಸೆಂಬರ್,25,2025 (www.justkannada.in): ಸರ್ಕಾರಿ ಕಚೇರಿ, ಖಾಸಗಿ ಕಚೇರಿ, ಬ್ಯಾಂಕ್ ಗಳು ಮತ್ತು ಇನ್ನಿತರೆ ಸಂಸ್ಥೆಗಳಿಗೆ ಸ್ವ-ಸಹಾಯ ಸಂಘದಿಂದ ತಯಾರಿಸಿದ ಶುಚಿ, ರುಚಿಯಾದ, ರಾಸಾಯನಿಕ ಮುಕ್ತವಾದ, ಪೌಷ್ಠಿಕಾಂಶಯುಕ್ತ ಆಹಾರದ ಡಬ್ಬಿಗಳನ್ನು ತಲುಪಿಸಲು ಪ್ರಾರಂಭಿಸಲಾಗುತ್ತಿರುವ “ಅಕ್ಕನ ಬುತ್ತಿ” ಆಹಾರ ತಯಾರಿಕಾ ಕೇಂದ್ರ (ಕ್ಲೌಡ್ ಕಿಚನ್)ದ ಪ್ರಚಾರ ಕಾರ್ಯಕ್ಕೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಚಾಲನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಕಚೇರಿಯ ಎಲ್ಲಾ ಶಾಖಾ ಮುಖ್ಯಸ್ಥರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮಖದಲ್ಲಿ ಆಹಾರ ತಯಾರಿಕಾ ಕೇಂದ್ರದ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಜಿ.ಪಂ. ಸಿಇಓ ನಂದಿನಿ ಕೆ.ಆರ್ ಅವರು, ಬೇವಿನಹಳ್ಳಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಒಕ್ಕೂಟದ ವಿನೂತನ ಪ್ರಯತ್ನವನ್ನು ಶ್ಲಾಘಿಸಿದರು.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಸ್ವ-ಸಹಾಯ ಸಂಘದ ಮೂಲಕ ಕಚೇರಿಗಳಿಗೆ ಆಹಾರದ ಡಬ್ಬಿಗಳನ್ನು ತಲುಪಿಸುವ ಕಾರ್ಯಕ್ರಮ ರೂಪಿಸಲಾಗಿದ್ದು, ಒಕ್ಕೂಟದ ಪ್ರಯತ್ನ ಯಶಸ್ವಿಯಾಗಲೆಂದು ಶುಭ ಕೋರಿದರು.
ಪ್ರತಿ ದಿನವೂ ವಿಭಿನ್ನ ಮೆನು: ವಾರದ ಆರು ದಿನವೂ ಮಧ್ಯಾಹ್ನದ ಊಟ ಲಭ್ಯವಿರಲಿದ್ದು, ಪ್ರತಿ ದಿನ ವಿಭಿನ್ನ ರೀತಿಯ ಆಹಾರವನ್ನು ನೀಡಲಾಗುತ್ತದೆ ಎಂದು ಸ್ವ-ಸಹಾಯ ಸಂಘದ ಮಹಿಳೆ ಸುಧಾಮಣಿ ಅವರು ತಿಳಿಸಿದರು.
ಮೊಬೈಲ್ ನಂಬರ್ ಒತ್ತಿ, ಬರಲಿದೆ ನಿಮ್ಮ ಕಚೇರಿಗೆ ಬುತ್ತಿ ಎಂಬ ಘೋಷ ವಾಕ್ಯದೊಂದಿಗೆ “ಅಕ್ಕನ ಬುತ್ತಿ” ಆಹಾರ ತಯಾರಿಕಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಉತ್ತಮ ಗುಣಮಟ್ಟದ ಆಹಾರವನ್ನು ಕಚೇರಿಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಸೇರಿದಂತೆ ಇತರೆ ಕಚೇರಿಗಳಲ್ಲಿ ನಡೆಯುವ ಸಭೆಗಳಿಗೂ ಸ್ವ-ಸಹಾಯ ಸಂಘಗಳಿಂದ ಮಧ್ಯಾಹ್ನದ ಉಪಾಹಾರ, ಕಾಫಿ, ಟೀ ಸರಬರಾಜು ಪಡೆಯುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ಎಲ್ಲಾ ತಾ.ಪಂ. ಇಓ ಗಳು ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಜಿ.ಪಂ. ಸಿಇಓ ನಂದಿನಿ ಕೆ.ಆರ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ನ ಯೋಜನಾ ನಿರ್ದೇಶಕರಾದ ರೂಪಶ್ರೀ ಕೆ.ಎನ್, ಉಪಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ, ಉಪಕಾರ್ಯದರ್ಶಿ (ಆಡಳಿತ) ಶಿವಲಿಂಗಯ್ಯ, ಮುಖ್ಯ ಯೋಜನಾಧಿಕಾರಿ ಧನುಷ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾ.ಪಂ. ಇಓಗಳು ಹಾಜರಿದ್ದರು.
Key words: ZP, CEO, promotion program, Akkana Butti, cooking center







