ಅರಮನೆ ನಗರಿಯಲ್ಲಿ ಇಂದು ಏರ್ ಶೋ: ಸಿಎಂ ಸಿದ್ದರಾಮಯ್ಯ ಭಾಗಿ

ಮೈಸೂರು, ಅಕ್ಟೋಬರ್ 23, 2023 (www.justkannada.in): ಅರಮನೆ ನಗರಿ ಮೈಸೂರಿನಲ್ಲಿ ಇಂದು ಏರ್‌ಶೋ ನಡೆಯಲಿದೆ.

ನಾಡಹಬ್ಬ ದಸರಾ ಅಂಗವಾಗಿ ಆಯೋಜಿಸಿರುವ ಏರ್‌ಶೋಗೆ ಸಿಎಂ ಸಿದ್ದರಾಮಯ್ಯ ಸಾಕ್ಷಿಯಾಗಲಿದ್ದಾರೆ.

ಭಾರತೀಯ ವಾಯುಪಡೆ ವತಿಯಿಂದ ಏರ್ ಶೋ ನಡೆಯುತ್ತಿದ್ದು, ಬನ್ನಿ ಮಂಟಪದಲ್ಲಿ ಯುದ್ಧ ವಿಮಾನಗಳಿಂದ ಪ್ರದರ್ಶನ ನಡೆಯಲಿದೆ.

ನಿನ್ನೆ ನಡೆದ ಏರ್‌ಶೋ ಪೂರ್ವ ತಾಲೀಮನ್ನು ಕೂಡ ಸಾವಿರಾರು ಮಂದಿ ಕಣ್ತುಂಬಿಕೊಂಡಿದ್ದರು. ಸಾರ್ವಜನಿಕರಿಗೆ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿತ್ತು. ಇಂದು ಪಾಸ್ ಇದ್ದವರಿಗೆ ಮಾತ್ರ ಪ್ರವೇಶವಿದೆ.

ಇನ್ನು ಜಂಬೂಸವಾರಿ ವೀಕ್ಷಣೆಗೆ ಆಗಮಿಸುವ ಅತಿ ಗಣ್ಯರು, ಗಣ್ಯರು, ಆಹ್ವಾನಿತರು, ಗೋಲ್ಡ್‌ ಕಾರ್ಡ್‌ ಹಾಗೂ ಟಿಕೆಟ್‌ ಹೊಂದಿರುವವರಿಗೆ ಅರಮನೆ ಆವರಣದಲ್ಲಿ ಆಸನದ ವ್ಯವಸ್ಥೆ ಮಾಡಲಾಗಿದೆ.

ಇಂದಿನಿಂದ ಮೂರು ದಿನಗಳ ಕಾಲ ಮೈಸೂರು ಪ್ರವಾಸ ಕೈಗೊಳ್ಳಲಿರುವ ಸಿಎಂ ಇಂದು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ನಾಳೆ ಬೆಳಗ್ಗೆ ಎಂಟು ಗಂಟೆಗೆ ಸಿದ್ದರಾಮಯ್ಯ, ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದಾರೆ.