ಕೃತಕ ಬುದ್ದಿಮತ್ತೆ ಅಂದ್ರೆ ರೈತರ ನಿರ್ಧಾರ ಶಕ್ತಿಯನ್ನು ಬಲಪಡಿಸುವ ತಂತ್ರಜ್ಞಾನ – ಡಾ. ಕೆ. ಎಂ. ಹರಿಣಿ ಕುಮಾರ್

ಮೈಸೂರು,ಫೆಬ್ರವರಿ,16,2026 (www.justkannada.in): ಕೃಷಿಯ ಭವಿಷ್ಯವನ್ನು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವ ಮೂಲಕ ಉಜ್ವಲಗೊಳಿಸಬಹುದು ಎಂದು ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ. ಕೆ. ಎಂ. ಹರಿಣಿ ಕುಮಾರ್ ಅವರು ಹೇಳಿದರು.

ಇಂದು ರೇಡಿಯೋ ಕಿಸಾನ್ ದಿನದ ಸಂದರ್ಭದಲ್ಲಿ ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆ ಹಾಗೂ ಕೃಷಿ ನವೋದ್ಯಮಗಳನ್ನು ಕುರಿತು ಭಾರತೀಯ ಭಾಷಾ ಸಂಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಡಾ. ಕೆ. ಎಂ. ಹರಿಣಿ ಕುಮಾರ್ ಮಾತನಾಡಿದರು. ಕೃಷಿಯ ಭವಿಷ್ಯವನ್ನು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸುವ ಮೂಲಕ ಉಜ್ವಲಗೊಳಿಸಬಹುದು ಎಂದು ಹೇಳಿದರು.

ಭಾರತದ ಕೃಷಿ ಭೂಮಿಯು ಸ್ವರ್ಗದ ಭೂಮಿ ಆದರೆ ರಾಸಾಯನಿಕಗಳ ಅತಿಯಾದ ಬಳಕೆಯಿಂದ ನಾವು ಅದನ್ನು ನರಕದ ಭೂಮಿಯಾಗಿ ಬದಲಾವಣೆ ಮಾಡುತ್ತಿದ್ದೇವೆ. ಕೃಷಿ ಕ್ಷೇತ್ರವು ದೇಶದ ಸಾಮಾಜಿಕ ಆರ್ಥಿಕ ವ್ಯವಸ್ಥೆಯ ಅಡಿಪಾಯಯವಾಗಿದೆ. ಗ್ರಾಮೀಣ ಬದುಕು ಈ ಕೃಷಿಯಿಂದಲೇ ನಡೆಯುತ್ತಿದೆ. ಆಹಾರ ಭದ್ರತೆ ಹಾಗೂ ವಿವಿಧ ರೀತಿಯ ಆಹಾರ ಸಂಸ್ಕರಣೆಯಿಂದ ಅತಿ ಹೆಚ್ಚು ಉದ್ಯೋಗವನ್ನು ಸೃಷ್ಟಿಸಬಹುದು ಎಂದು ಹೇಳಿದರು.

ಕೃಷಿ  ಕ್ಷೇತ್ರ ಶೇ 46% ರಷ್ಟು ಜನಸಂಖ್ಯೆಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗವನ್ನು ಒದಗಿಸುತ್ತಿದ್ದು, ಒಟ್ಟು ದೇಶಿಯ ಉತ್ಪನ್ನಕ್ಕೆ ಶೇಕಡ 18 % ರಷ್ಟು ಜಿಡಿಪಿಯನ್ನು ಕೊಡುಗೆಯಾಗಿ ಕೃಷಿ ಕ್ಷೇತ್ರ ನೀಡುತ್ತಿದೆ.  ಕೃಷಿಯನ್ನು ನಂಬಿ ನಡೆಯುವ ಕೈಗಾರಿಕೆಗಳು ಆರ್ಥಿಕವಾಗಿ ಸದೃಢವಾಗಲು ಹೊಸ ಆಯಾಮಗಳನ್ನು ರೂಪಿಸಿಕೊಳ್ಳಬೇಕಿದೆ ಎಂದರು‌

ಸರ್ಕಾರ ಕೃಷಿ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡುತ್ತಿದ್ದರು ಕೃಷಿ ಕ್ಷೇತ್ರದಲ್ಲಿ  ಹವಾಮಾನ ಬದಲಾವಣೆ, ಕೃಷಿ ವೆಚ್ಚದ ಏರಿಕೆ, ಬೆಳೆಯ ಅಪಾಯಗಳು ಮಾರುಕಟ್ಟೆಯ ಅಸ್ಥಿರತೆಗಳಿಂದ ಕೃಷಿ ಕ್ಷೇತ್ರದಲ್ಲಿ ತೊಂದರೆಗಳನ್ನು ಅನುಭವಿಸಲಾಗುತ್ತಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ದತ್ತಾಂಶ ಆಧಾರಿತ ಹಾಗೂ ಮುಂಚಿತ ನಿರ್ಧಾರಗಳನ್ನು ಕೈಗೊಳ್ಳಲು ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಸಹಾಯವನ್ನು ಬಳಸಿಕೊಳ್ಳಬಹುದಾಗಿದೆ. ಕೃತಕ ಬುದ್ಧಿಮತ್ತೆಯಿಂದ ರೈತರ ಜೀವನೋಪಾಯವನ್ನು ಬದಲಾವಣೆ ಮಾಡಲು ಅತ್ಯಂತ ಸಹಾಯಕವಾಗಿದೆ. ರೈತರು ಜ್ಞಾನವನ್ನು ಹೆಚ್ಚು ಗಳಿಸುವಲ್ಲಿ ಕೃತಕ ಬುದ್ಧಿಮತ್ತೆಯು ಸಹಾಯಕವಾಗಿದೆ  ಎಂದು ತಿಳಿಸಿದರು.

ಆಕಾಶವಾಣಿಯ ಸಹಾಯಕ ನಿರ್ದೇಶಕರಾದ  ಮಂಜುನಾಥ್ ಎನ್. ಬೇದ್ರೆ ಅವರು ಮಾತನಾಡಿ ಕೃಷಿ  ಕ್ಷೇತ್ರಕ್ಕೆ ಆಕಾಶವಾಣಿ ರೇಡಿಯೋ  ಮಹತ್ತರ ಪ್ರಾಮುಖ್ಯತೆ  ಪಾತ್ರ ವಹಿಸಿಕೊಂಡು  ಮುನ್ನಡೆಸುತ್ತ ಬರುತ್ತಿದೆ. ಆಕಾಶವಾಣಿಯಲ್ಲಿ ಬರುವ ಕೃಷಿ ಕಾರ್ಯಕ್ರಮಗಳಲ್ಲಿ ಇನ್ನು ಹೊಸ  ಹೊಸ ವಿನೂತನ ಕಾರ್ಯಕ್ರಮಗಳನ್ನು ರೈತರಿಗೆ ಹಂತ ಹಂತವಾಗಿ ತಲುಪಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಆಕಾಶವಾಣಿಯಲ್ಲಿ ನಡೆಸುವ ಕೃಷಿ ರಂಗದ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆ ಕ್ಷಣದ ಅಗತ್ಯಗಳನ್ನು ಕೃಷಿ ರಂಗದ ಕಾರ್ಯಕ್ರಮದಲ್ಲಿ ರೈತರಿಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.

ಕೃತಕ ಬುದ್ಧಿಮತ್ತೆಯನ್ನು ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ  ಹಾಗಾಗಿ  ಕೃಷಿ ಕ್ಷೇತ್ರದಲ್ಲೂ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಂಡರೆ ರೈತರಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ಭಾಷಾ ಸಂಸ್ಥಾನ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್, ಆಕಾಶವಾಣಿ ಕಾರ್ಯಕ್ರಮದ ನಿರ್ವಾಹಕ  ಎನ್. ಕೇಶವ ಮೂರ್ತಿ, ಗಣ್ಯರಾದ ಪಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

Key words: AI, technology, strengthens, farmers, Dr. K. M. Harini Kumar