ದೇವನಹಳ್ಳಿ ಬಳಿ ಶಾಶ್ವತ ವಿಶೇಷ ಕೃಷಿ ವಲಯ: ಅಪಪ್ರಚಾರ, ತಪ್ಪು ಕಲ್ಪನೆ ಬೇಡ- ಸರ್ಕಾರದಿಂದ ಸ್ಪಷ್ಟನೆ

ಬೆಂಗಳೂರು,ಡಿಸೆಂಬರ್,9,2025 (www.justkannada.in):  ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ವ್ಯಾಪ್ತಿಯ 1,777 ಎಕರೆ ಜಮೀನನ್ನು `ಶಾಶ್ವತ ವಿಶೇಷ ಕೃಷಿ ವಲಯ’ವೆಂದು ಸರಕಾರ ಘೋಷಿಸಿದೆ. ಇದರಲ್ಲಿ ರೈತರು ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಅದಕ್ಕೆ ಮುಕ್ತ ಅವಕಾಶವಿದೆ. ಈ ಕುರಿತು ರೈತರು ಅಪಪ್ರಚಾರ, ಗೊಂದಲ ಮತ್ತು ತಪ್ಪು ಕಲ್ಪನೆಗಳಿಗೆ ಕಿವಿಗೊಡಬಾರದು ಎಂದು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಹೇಳಿದ್ದಾರೆ.

ಈ ಸಂಬಂಧವಾಗಿ ಕೆಲವು ಕಡೆಗಳಲ್ಲಿ, ರೈತರ ಜಮೀನು ಮಾರಾಟದ ಹಕ್ಕನ್ನೇ ಕಿತ್ತುಕೊಳ್ಳಲಾಗಿದೆ ಎನ್ನುವಂತೆ ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, `ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮಗಳ ರೈತರು, ಕೃಷಿಯನ್ನು ಮುಂದುವರಿಸಿಕೊಂಡು ಹೋಗುವ ಅಪೇಕ್ಷೆ ವ್ಯಕ್ತಪಡಿಸಿದ್ದರು. ಸರಕಾರವು ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದೆ. ಹೀಗೆ ಮಾಡುವುದರಿಂದ ರೈತರಿಗೆ ತೊಂದರೆ ಆಗುತ್ತದೆ ಎಂಬುದು ಸುಳ್ಳು. ಸರ್ಕಾರದ ಉದ್ದೇಶ ಈ ಕೃಷಿ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಮಾಡುವುದನ್ನು ಹಾಗೂ ರೈತರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಡುವವರಿಗೆ ಕಡಿವಾಣ ಹಾಕುವುದೇ ಆಗಿದೆ. ತಮ್ಮ ಜಮೀನನ್ನು ಮಾರಾಟ ಮಾಡುವ ರೈತರ ಸ್ವಾತಂತ್ರ್ಯ ಮತ್ತು ಹಕ್ಕನ್ನು ಕಸಿದುಕೊಂಡಿಲ್ಲ’ ಎಂದು ವಿವರಿಸಿದ್ದಾರೆ.

ದೇವನಹಳ್ಳಿ ಸಮೀಪ ಏರೋಸ್ಪೇಸ್ ಪಾರ್ಕ್ ಸ್ಥಾಪಿಸಲು ಸರಕಾರಕ್ಕೆ ಈ ಭೂಮಿಯ ಅಗತ್ಯ ಹೆಚ್ಚು ಇತ್ತು. ಆದರೂ ರೈತರ ಬೇಡಿಕೆಯನ್ನು ಪರಿಗಣಿಸಿ, ಇಲ್ಲಿ ಕೃಷಿ ಅಭಿವೃದ್ಧಿಗೆ ತೀರ್ಮಾನಿಸಲಾಗಿದೆ. ಇದನ್ನೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸ್ವಾಧೀನಕ್ಕೆ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ. ಇಷ್ಟಾದರೂ, ರೈತರು ತಾವಾಗಿಯೇ ಸರಕಾರಕ್ಕೆ ಜಮೀನು ಕೊಡಲು ಮುಂದೆ ಬಂದರೆ ಅದಕ್ಕೂ ಅವಕಾಶವಿದೆ. ಇಂತಹ ಜಮೀನುಗಳಿಗೆ ಭೂದರ ನಿರ್ಧಾರ ಸಮಿತಿಯ ತೀರ್ಮಾನದಂತೆ ಪರಿಹಾರ ಕೊಡಲಾಗುವುದು. ಆದರೆ, ಸರಕಾರಕ್ಕೆ ಮಾತ್ರವೇ ಜಮೀನು ಮಾರಾಟ ಮಾಡಬೇಕು ಎಂಬ ಯಾವ ನಿರ್ಬಂಧವೂ ಇಲ್ಲ ಎಂದು ಸೆಲ್ವಕುಮಾರ್ ಅವರು ಹೇಳಿದ್ದಾರೆ.

ಈ 13 ಗ್ರಾಮಗಳ ಜಮೀನಿನ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿನೋಟಿಫೈ ಮಾಡಿ, ಕೃಷಿ ವಲಯವಾಗಿ ಉಳಿಸಿಕೊಳ್ಳಲು ತೀರ್ಮಾನಿಸಲಾಗಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇದನ್ನು ‘ಶಾಶ್ವತ ವಿಶೇಷ ಕೃಷಿ ವಲಯ’ವನ್ನಾಗಿ ಮಾಡಿ, ರೈತರಿಗೆ ಹೆಚ್ಚಿನ ಅನುಕೂಲ ಮಾಡಲಾಗಿದೆ. ಜೊತೆಗೆ, ಕೃಷಿ ಅಭಿವೃದ್ಧಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುವುದು’ ಎಂದು ಸೆಲ್ವಕುಮಾರ್ ಹೇಳಿದ್ದಾರೆ.

ಮೇಲ್ಕಂಡ ಗ್ರಾಮಗಳ ಜಮೀನುಗಳು ಈಗಾಗಲೇ ಹಸಿರು ವಲಯದಲ್ಲಿವೆ. ಇಲ್ಲಿ ಕೈಗಾರಿಕೆ ಬೆಳವಣಿಗೆಗೆ ಸಮಾನಾಂತರವಾಗಿ ಕೃಷಿ ಬೆಳವಣಿಗೆಯೂ ಆಗಬೇಕು ಎನ್ನುವುದು ಸರಕಾರದ ಬಯಕೆಯಾಗಿದೆ. ಹೀಗಾಗಿಯೇ ಇದನ್ನು ಶಾಶ್ವತ ವಿಶೇಷ ಕೃಷಿ ವಲಯವನ್ನಾಗಿ ಮಾಡಲಾಗಿದೆ. ಇದರಿಂದಾಗಿ ಇಲ್ಲಿ ಕೃಷಿ ಕ್ಷೇತ್ರಕ್ಕೂ ಬಂಡವಾಳ ಹೂಡಿಕೆ ಹರಿದು ಬರಲಿದೆ ಎಂದು ವಿವರಿಸಿದ್ದಾರೆ.

ಶಾಶ್ವತ ವಿಶೇಷ ಕೃಷಿ ವಲಯದಲ್ಲಿ ಹೆಚ್ಚು ಇಳುವರಿ ಕೊಡುವ ಬೀಜಗಳು, ಶೀತಲಗೃಹಗಳು, ಸಾವಯವ ಕೃಷಿ, ಆಧುನಿಕ ಕೃಷಿ ತಂತ್ರಜ್ಞಾನ, ಹೈಡ್ರೋಪೋನಿಕ್ಸ್, ಮಣ್ಣು ಮತ್ತು ನೀರಿನ ಉತ್ತಮ ನಿರ್ವಹಣೆ, ನೇರ ಮಾರುಕಟ್ಟೆ ಸೌಲಭ್ಯ, ದಲ್ಲಾಳಿಗಳ ಕಾಟದಿಂದ ಮುಕ್ತಿ, ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಲೆ, ಇ-ಟ್ರೇಡಿಂಗ್ ಮತ್ತು ಡಿಜಿಟಲ್ ಮಾರುಕಟ್ಟೆ, ರೈತರು ಮತ್ತು ಕೃಷಿ ನವೋದ್ಯಮಗಳಿಗೆ ವಿಶೇಷ ತೆರಿಗೆ ರಿಯಾಯಿತಿ/ವಿನಾಯಿತಿ, ಕೃಷಿ-ವಾಣಿಜ್ಯ ಯೋಜನೆಗಳಿಗೆ ತ್ವರಿತ ಅನುಮೋದನೆ, ಕೃಷಿ ಆಧರಿತ ಉದ್ಯಮಗಳ ಬೆಳವಣಿಗೆ, ಕೃಷಿ ಉತ್ಪನ್ನಗಳ ರಫ್ತು ವಹಿವಾಟು, ಉಗ್ರಾಣಗಳ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗ ಇವೆಲ್ಲವೂ ಸಾಧ್ಯವಾಗಲಿವೆ ಎಂದು ಡಾ.ಎಸ್.ಸೆಲ್ವಕುಮಾರ್ ಮಾಹಿತಿ ಕೊಟ್ಟಿದ್ದಾರೆ.

ಇದಲ್ಲದೆ ಕೃಷಿ ಚಟುವಟಿಕೆಗಳಿಗೆ ಬೇಕಾದ ಆಧುನಿಕ ಸ್ವರೂಪದ ತರಬೇತಿ, ಪ್ರಯೋಗಾಲಯಗಳು, ಗುಣಮಟ್ಟ ಪರೀಕ್ಷೆ ಸೌಲಭ್ಯ, ಆಹಾರ ಸಂಸ್ಕರಣಾ ಘಟಕಗಳು, ಕೃಷಿ ಸಾಲ ಮತ್ತು ಬ್ಯಾಂಕಿಂಗ್ ಸೇವೆಗಳು, ಸಂಶೋಧನೆ ಮತ್ತು ಸಹಭಾಗಿತ್ವ ಮುಂತಾದ ಅನುಕೂಲಗಳನ್ನು ಕೂಡ ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈಗಾಗಲೇ ತಮಿಳುನಾಡು, ಛತ್ತೀಸಗಢ, ಉತ್ತರಾಖಂಡ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈ ರೀತಿಯ ವಿಶೇಷ ಕೃಷಿ ವಲಯಗಳಿವೆ. ಹಾಗೆಯೇ ವಿದೇಶಗಳಲ್ಲಿಯೂ ಇರುವುದನ್ನು ಗಮನಿಸಿದ್ದೇವೆ. ಅಂತಹ ಕಡೆ ರೈತರಿಗೆ ಏನೇನು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎನ್ನುವುದನ್ನು ಅಧ್ಯಯನ ಮಾಡಲು ಒಂದು ಸಮಿತಿಯನ್ನೂ ಸದ್ಯದಲ್ಲೇ ರಚಿಸಲಾಗುವುದು. ಅಂತಹ ಅನುಕೂಲಗಳನ್ನು ಇಲ್ಲೂ ಒದಗಿಸಲಾಗುವುದು ಎಂದು ಡಾ.ಎಸ್.ಸೆಲ್ವಕುಮಾರ್ ಅವರು ತಿಳಿಸಿದ್ದಾರೆ.

Key words: Permanent, Special Agricultural Zone, Devanahalli, government