ಸೆ.24ಕ್ಕೆ ಸಪ್ತಪದಿ ತುಳಿಯಲಿದ್ದಾರೆ ನಟಿ ಪರಿಣಿತಿ ಚೋಪ್ರಾ-ರಾಘವ್ ಚಡ್ಡಾ

ಬೆಂಗಳೂರು, ಸೆಪ್ಟೆಂಬರ್ 14, 2023 (www.justkannada.in): ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಾರ್ಟಿಯ ನಾಯಕ ಹಾಗೂ ರಾಜ್ಯಸಭೆ ಸದಸ್ಯ ರಾಘವ್ ಚಡ್ಡಾ ಇದೇ ತಿಂಗಳು 24ಕ್ಕೆ ಹಸೆಮಣೆ ಏರಲಿದ್ದಾರೆ.

ಪರಿಣಿತಿ ಚೋಪ್ರಾ- ರಾಘವ್ ಚಡ್ಡಾ ಮದುವೆ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಮದುವೆಯ ಕುರಿತಾದ ಮಾಹಿತಿಗಳು ಖಚಿತಗೊಂಡಿದ್ದು, ಸೆಪ್ಟೆಂಬರ್ 24ರಂದು ಇವರಿಬ್ಬರು ಸಪ್ತಪದಿ ತುಳಿಯಲಿದ್ದಾರೆ.

ಮದುವೆ ಆಮಂತ್ರಣ ಪತ್ರಿಕೆಯ ಪ್ರಕಾರ, ತಾಜ್ ಸರೋವರದಲ್ಲಿ ಮಧ್ಯಾಹ್ನ 1 ಗಂಟೆಗೆ ನಡೆಯುವ ರಾಘವ್ ಅವರ ಸೆಹ್ರಾಬಂದಿ ಮದುವೆಯ ಮೊದಲ ಕಾರ್ಯವಾಗಿದೆ. ತಾಜ್ ಸರೋವರದಿಂದ ಮಧ್ಯಾಹ್ನ 2 ಗಂಟೆಗೆ ಮತ್ತೊಂದು ಸಮಾರಂಭ (ಬಾರಾತ್) ನಡೆಯಲಿದೆ.

ಜಯಮಾಲಾ ಕಾರ್ಯಕ್ರಮವು ಮಧ್ಯಾಹ್ನ 3.30ಕ್ಕೆ ನಡೆಯಲಿದೆ. ಸಂಜೆ 4 ಗಂಟೆಗೆ ಫೆರಾಸ್ ಮತ್ತು ಸಂಜೆ 6.30ಕ್ಕೆ ವಿದೈ ನಡೆಯಲಿದೆ. ಅಂದೇ ಸಂಜೆ ಕುಟುಂಬಗಳ ಸದಸ್ಯರು ಮತ್ತು ಸ್ನೇಹಿತರಿಗಾಗಿ ಆರತಕ್ಷತೆ ಕೂಡ ನಡೆಯಲಿದೆ.

ಅಂದಹಾಗೆ ಇದೇ ವರ್ಷದ ಮೇ ತಿಂಗಳಲ್ಲಿ ರಾಘವ್ ಚಡ್ಡಾ ಅವರು ಮತ್ತು ನಟಿ ಪರಿಣಿತಿ ಚೋಪ್ರಾ ಅವರು ತಮ್ಮ ಬಂಧುಗಳು, ಸ್ನೇಹಿತರು ಮತ್ತು ಕುಟುಂಬದ ಸದಸ್ಯರ ಎದುರು ನಿಶ್ಚಿತಾರ್ಥ ಮಾಡಿಕೊಂಡಿದ್ದರು.