ಮೈಸೂರಿನ ಮಸಾಜ್ ಪಾರ್ಲರ್ ಮಹಿಳಾ ಸಿಬ್ಬಂದಿ ಜೊತೆ ಸಾಧು ಕೋಕಿಲಾ, ಮಂಡ್ಯ ರಮೇಶ್ ಅನುಚಿತ ವರ್ತನೆ ಪ್ರಕರಣ: ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಬೆಂಗಳೂರು, ಡಿಸೆಂಬರ್ 12, 2019 (www.justkannada.in): ಮೈಸೂರಿನ ಮಸಾಜ್ ಪಾರ್ಲರ್ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ಘನತೆ ಧಕ್ಕೆ ತಂದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಾಧುಕೋಕಿಲ, ಮಂಡ್ಯ ರಮೇಶ್ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಜಿ ನರೇಂದರ್ ಅವರಿದ್ದ ನ್ಯಾಯಪೀಠ ಅರ್ಜಿದಾರರ ವಿರುದ್ಧ ಆರೋಪ ಸಾಬೀತುಪಡಿಸುವಂತಹ ಅಂಶಗಳಿಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಅಧೀನ ಕೋರ್ಟ್ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಸಾಧುಕೋಕಿಲ ಹಾಗೂ ಮಂಡ್ಯ ರಮೇಶ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದಕ್ಕೂ ಮುನ್ನ ಅಕ್ಟೋಬರ್ ತಿಂಗಳಿನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಮಾಡಿತ್ತು.

ತಮ್ಮ ವಿರುದ್ಧ ಹೊರಡಿಸಲಾಗಿದ್ದ ಸಮನ್ಸ್ ರದ್ದುಪಡಿಸುವಂತೆ ಕೋರಿ ಸಾಧುಕೋಕಿಲ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಬಿ. ಭಜಂತ್ರಿ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ, ನೋಟಿಸ್ ಜಾರಿಗೊಳಿಸಲು ಆದೇಶಿಸಿತ್ತು.

ಸಾಧುಕೋಕಿಲ ವಿರುದ್ಧ ಸಂಗ್ರಹಿಸಿರುವ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶಿಸಲಾಗಿತ್ತು. ಈ ಪ್ರಕರಣದಲ್ಲಿ ತಾವು ತಪ್ಪಿತಸ್ಥರಲ್ಲ. ತಮಗೆ ಕಳಂಕ ತರಲು ಈ ಆರೋಪ ಮಾಡಲಾಗಿದೆ ಎಂದು ಸಾಧು ಕೋಕಿಲ ಸ್ಪಷ್ಟನೆ ನೀಡಿದ್ದರು.