Tuesday, August 18, 2026

BDA Apartments

Home Front Page ಗಾಂಧೀಜಿ, ಶಾಸ್ತ್ರಿಯವರ ತತ್ವವನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಿ: ಸಚಿವ ಎಸ್.ಟಿ.ಸೋಮಶೇಖರ್

ಗಾಂಧೀಜಿ, ಶಾಸ್ತ್ರಿಯವರ ತತ್ವವನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಿ: ಸಚಿವ ಎಸ್.ಟಿ.ಸೋಮಶೇಖರ್

 

ಮೈಸೂರು, ಅಕ್ಟೋಬರ್ 2, 2022 (www.justkannada.in news) ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಮೈಗೂಡಿಸಿಕೊಳ್ಳಬೇಕು. ಅವರ ಸರಳತೆ, ಸಮರ್ಥ ನಾಯಕತ್ವವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆ ಅಂಗವಾಗಿ ನಗರದ ಗಾಂಧಿ ಸ್ಕ್ವೇರ್ ನಲ್ಲಿನ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಗಾಂಧೀಜಿಯವರಲ್ಲಿದ್ದ ಅಹಿಂಸಾ ತತ್ವ, ಆಧ್ಯಾತ್ಮಿಕತೆ, ಪ್ರಾಮಾಣಿಕತೆ, ಶಿಸ್ತು ಮೊದಲಾದ ಗುಣಗಳು ಎಲ್ಲರನ್ನೂ ಪ್ರೇರೇಪಿಸುತ್ತಿದೆ. ಮಹಾತ್ಮ ಗಾಂಧೀಜಿಯವರ ವಿಚಾರಗಳು ಕೇವಲ ಭಾರತಕ್ಕೆ ಮಾತ್ರವಲ್ಲದೇ ಇಡೀ ವಿಶ್ವಕ್ಕೆ ಅವಶ್ಯಕವಾಗಿವೆ ಎಂದರು.

ಗಾಂಧೀಜಿಯವರು ಸತ್ಯ, ಅಹಿಂಸೆಯ ಮಾರ್ಗವನ್ನೇ ಸ್ವಾತಂತ್ರ್ಯ ಚಳುವಳಿಗೆ ಅನುಸರಿಸಿದರು. ಅತ್ಯಂತ ಸರಳತೆಯ ಜೀವನ ನಡೆಸಿದರು. ಮಹಾತ್ಮ ಗಾಂಧಿಯವರ ವಿಚಾರಗಳು ಎಂದೆಂದಿಗೂ ಅಮರವಾಗಿರಲಿದೆ ಎಂದು ಹೇಳಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಈ ದೇಶ ಕಂಡ ಸರಳ ಸಜ್ಜನಿಕೆಯ ಪ್ರಧಾನಿಯಾಗಿದ್ದರು. ರೈತ ಹಾಗೂ ಸೈನಿಕರಿಗಾಗಿ “ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆ ನೀಡಿದ ದಕ್ಷ ಆಡಳಿತಗಾರರು. ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ತತ್ವವನ್ನು ನಿತ್ಯದ ಬದುಕಿನಲ್ಲಿ ಅಳವಡಿಕೊಳ್ಳುವುದು ಇಂದಿನ ಅಗತ್ಯಗಳಲ್ಲೊಂದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಸಿಇಒ ಪೂರ್ಣಿಮಾ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೇ ಶ್ರೀನಿವಾಸ್, ಜಂಗಲ್ಸ್ ಲಾಡ್ಜ್ಸ್ ಅಂಡ್ ರೆಸಾರ್ಟ್ಸ್ ಮಾಜಿ ಅಧ್ಯಕ್ಷರಾದ ಅಪ್ಪಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

key words : mysore-gandhi-somashekar-minister